ಬಾಳ ಪಯಣದ ಕೊನೆಯವರೆಗೆ

ಕೈ ನಡುಗುತಿರಲಿ ಹೆಜ್ಜೆ ಭಾರವಾಗಲಿ ಬಾಗಿದ ಬೆನ್ನು ಮುಪ್ಪ ಸಾರಲಿ
ಕನಸೊ ನನಸೊ ಸರಸವೊ ವಿರಸವೊ ನೀನಿರದೆ ಇರಲಾಗದು ಬಾಳಲಿ
ಕೂಡದಿದ್ದರೇನು ಜೀವನ ನಡುಗೆಯ ‌ಹೆಜ್ಜೆಗಳು
ಪ್ರೇಮಕೆ ಮಿತಿ‌ ಉಂಟೆ ಸೇರಿದ‌ ಮೇಲೆ ಮನಸುಗಳು
ನಮ್ಮೀ ಪ್ರೀತಿಯ ‌ನೋಡುತ ಹರುಷದಲೆ ಉರುಳಿವೆ ವರ್ಷಗಳು

ಸುಡುತಿರಲಿ ನೆತ್ತಿಯ ಮೇಲೆ ಆ ನೇಸರ
ಹೆಗಲೇರಲಿ ನೋವಿನ ಮಣ ಭಾರ
ಹಿಂಬಾಲಿಸಿ‌ ಬರಲಿ‌ ಕಷ್ಟಗಳ ಸರ
ನೀ ನನ್ನ ಅನುಸರಿಸಿರಲು ನಾ ಕಾಣೆನು ನಿಟ್ಟುಸಿರ
ಜೊತೆಗೂಡಿ ಬಾಳ ತುಂಬಾ ಕಲಿಯುವ ಜೀವನ ಸಾರ

ಕುಂಟಿ ನಡೆದರೇ ಈ ಜೀವನ ನೀನೆ ಊರುಗೋಲು
ಸಂತಸದಿ ನಾಗಲೋಟದಿ ಓಡಿದರೂ ನೀನೆ‌ ಅಲ್ಲಿ ಮೇಲು
ಯಾರೇ ಬರಲಿ ಜೊತೆಯಾಗಿ ವಿರದ್ಧವಾಗಿ ಸಾಲುಸಾಲು
ನೀನಿರದೆ ಕಳೆಯಿರದೆ ನಲುಗುವುದು ‌ನನ್ನೆದೆಯ ಮಹಲು
ನನ್ನ ಈ ಬಾಳ ಹಾದಿಯಲಿ‌ ಎಂದಿಗೂ ನಿನಗೆ ಸಮಪಾಲು

ಪ್ರೇಮದಲಿ ಒಲಿದ‌ ಜೀವಗಳು ನಾವಿಬ್ಬರು
ಏನಾದರು ಬರಲಿ ‌ಜೊತೆಗಿರುವ ಒಬ್ಬರಿಗೊಬ್ಬರು
ನೀನೆಂದು ನನಗೆ,‌ ನಾನೆಂದು ನಿನಗೆ
ಹೀಗೆ ಸಾಗುತಲಿರುವ ಜೊತೆ ಜೊತೆಗೆ
ಈ ಬಾಳ ಪಯಣದ ಕೊನೆಯವರೆಗೆ

- ಶ್ರೀಕಾವ್ಯ

08 Oct 2017, 10:24 pm
Download App from Playstore: