ನಾವೆಲ್ಲರು ಒಂದೆ

ಅವ್ವ ಹಚ್ಚಿಟ್ಟಿದ್ದಾಳೆ ಹಟ್ಟಿಯಲ್ಲೊಂದು ದೀಪ
ಅಮ್ಮ ಹಚ್ಚಿಟ್ಟಿದ್ದಾಳೆ ಮನೆಯಲ್ಲೊಂದು ದೀಪ‌
ಮಾ‌ ಹಚ್ಚಿಟ್ಟಿದ್ದಾಳೆ ಬಂಗಲೆಯಲ್ಲೊಂದು ದೀಪ
ಕತ್ತಲೆಯ ಕಳೆದು ಮನೆಯ ಬೆಳಗುವ ದೀಪ

ದೀಪಕ್ಕೆ ಎಣ್ಣೆ, ಎಣ್ಣೆಯೊಳಗೊಂದು ಬತ್ತಿ
ಹತ್ತಿಯ ಬತ್ತಿಯ ತುದಿಯಲಿ ನಗುವ ಜ್ಯೋತಿ
ಹಚ್ಚಿರುವರು ಬೇಡಿ ಮನೆಯಲಿರಲೆಂದು ಸುಖ ಶಾಂತಿ
ನೋಡಿ ಹರುಷ‌‌ ಪಡುವರು ದೀಪದ ಕಾಂತಿ

ಮಾನವನ ಅಂತಸ್ತು,ಆಲೋಚನೆಗಳಿರುವಂತೆ ಬೇರೆ ಬೇರೆ
ಹಟ್ಟಿ, ಮನೆ, ಬಂಗಲೆಯ ದೀಪಗಳು ಬೇರೆ ಬೇರೆ
ಆ ಎಲ್ಲ ದೀಪದ ಎಣ್ಣೆ, ಬತ್ತಿ, ಬೆಳಗುವ ಬೆಳಕು ಎಂದೂ ಒಂದೆ
ಎಂದಮೇಲೆ ಮಾನವನೇಕೆ ಸಾರುತ್ತಿಲ್ಲ ಇನ್ನೂ ನಾವೆಲ್ಲರು ಒಂದೆ

ಹಚ್ಚೋಣ‌ ಹಣತೆ ಮನೆಯಂಗಳದಲಿ
ಇನ್ನೆಂದೂ ನಾವೆಲ್ಲರು ಒಂದೆ ಎಂದೂ ಏಕತೆಯಲಿ
ತೊಲಗಲಿ ಮಾನವನೆ ಮಾನವನ ನಾಶ ಮಾಡುವ ಅಸಮಧಾನ
ಒಬ್ಬರೊನ್ನೊಬ್ಬರ ಅಪ್ಪಿ ಸಾರೋಣ ನಾವೆಲ್ಲರು ಸಮಾನ

ಮೂಡಲಿ ಮೊಗದಲಿ ‌ಪ್ರೇಮ‌‌ ತುಂಬಿದ ನಗೆ
ದುಷ್ಟ ತನವೆಲ್ಲ ಒಮ್ಮೆಲೆ‌ ಮನಸಿಂದ ಹಾರಿಹೋಗುವ ಹಾಗೆ
ದೀಪದ ಬೆಳಕು ಬೆಳಗಲಿ ಮನಸೊಳಗೆ
ತೊಲಗಲಿ‌ ಎದೆಯೊಳಗೆ ಉಳಿದ ಕತ್ತಲೆಯ ಸೋಗೆ

- ಶ್ರೀಕಾವ್ಯ

10 Oct 2017, 05:55 pm
Download App from Playstore: