ಮದರಂಗಿ ಕೈಯವಳು !

ಅಂದದ ಚೆಂದದ ಬಾಲೆಯೇ
ಯಾರು ಬರೆದರು ಹೇಳೇ ಚಿತ್ತಾರವ ||
ಆನೆಯ ದಂತದೊಲು ನುಣುಪಾಗಿ ಹೊಳೆದಂತ||
ಅಂಗೈಗೆ ಬಂದೈತೆ ರಂಗಿ,
ಯಾರು ಬರೆದರು ಹೇಳೇ ಮದರಂಗಿ ||

ಹೂವಿನ ಎಸಳಂತ ಕೈಯಿ.
ಹೊನ್ನ ಕಳಶದಂತಹಾ ನಿನ್ನ ಮೈಯಿ.
ಬೆರಳುಗಳ ಶೃಂಗಾರ, ಯಾಕೆ ಬೇಕು ಬಂಗಾರ||
ಮರಳಿ ನೋಡಿಕೊ ನಿನ್ನ ಕರವ
ಅರಳಿ ನಿಂತಿಹುದಲ್ಲೇ ಕೆಂಪು ಹೂವ ||

ಚೆಲುವಾತಿ ಚೆನ್ನಿಯೇ ಕೇಳು,
ನಿನ್ನ ಮದರಂಗಿ ಗುಟ್ಟು ಕೊಂಚ ಹೇಳು.
ಒಬ್ಬಳೇ ಇರುವಾಗ, ದೇವ ಕಿನ್ನರ ಬಂದು||
ಬರೆದು ಹೋದನೋ ಏನೋ ಹೂವ.
ನೀ ಜಾರಿ ಬಿಡಲಿಲ್ಲ ತಾನೇ ಮನವ||

- ಶ್ರೀಗೋ.

10 Oct 2017, 08:52 pm
Download App from Playstore: