ಇನಿಯನಿಗೆ ಓಲೆ

ನಿನಗಾಗಿಯೆ ಒಂದು ಪ್ರೀತಿಯ ಓಲೆಯ
ಬರೆಯಬೇಕೆನಿಸುತ್ತದೆ ದೂರಾಗಿರುವ ಇನಿಯ‌
ಹೊರಗಿಣುಕಿದಾಗಲೆಲ್ಲ ಒಳದನಿ
ನಡುಗುವುದು ‌ಕೈಯಲ್ಲಿಡಿದ ಲೇಖನಿ‌

ಗೀಚಿತ್ತು ಹರುಷದಲೆ ನೂರಾರು ಪ್ರೇಮಪತ್ರ
ನಾ ಸೇರಿ ನಗುತ ಬಾಳಬೇಕೆಂದು ನಿನ್ನ ಹತ್ರ
ಈಗ ಕಂಡಾಗ ಕಣ್ಣಾಲಿಯಲಿ ನಿಂತ ನೀರ ಹನಿ
ಸುರಿಸುತಿದೆ ಆ ಲೇಖನಿಯು ನೋಯುತ ಕಂಬನಿ

ಆ ಎಲ್ಲ ಸವಿ ನೆನಪುಗಳು ಕಾಡುವ ಘಳಿಗೆ
ತೆರೆಯುವುದು ನನ್ನೆದೆಯೊಳಗೆ ನೋವಿನ ಮಳಿಗೆ
ಸಿಗಬಹುದು ಯಾರಾದರು ಕೊಡುವವರು ನಗುವಿನ ಗುಳಿಗೆ
ಆದರೆ ನೀನೆನೆ‌ ಮೊದಲು ಕೊನೆ ಪ್ರೇಮದೊಲವಿನ ಬಾಳಿಗೆ

ಕಾಯುವೆನು ನಿನಗಾಗಿ ಆಗಲಿ ಎಷ್ಟಾದರು ವರುಷ
ನೀನಿದ್ದರೆ ನಗುತ ಜೊತೆಗೆ ಬಾಳ‌‌ಲಿ ನನಗದೆ ಹರುಷ
ನಿನ್ನ ನೆನದಾಗಲೆಲ್ಲ‌ ಸುರಿವುದು ‌ಕಣ್ಣಲಿ‌ ಕಣ್ಣೀರನಿಯ ವರ್ಷ
ನಿನಗಾಗಿ ಬರೆದ ಕಾಗದ ಮಸುಕಾಗಿದೆ, ತಾಗಿ ಕಣ್ಣೀರ ಸ್ಪರ್ಶ

ನಿನಗಾಗಿ ಓಲೆ ಬರೆಯಲು ಕುಳಿತಾಗ ಇದೆ ಪುನರಾವರ್ತನೆ
ಹೇಳಲಾಗದು ನಿನಗೆ ನನ್ನ ಮನದೊಳಗಿನ ಯಾತನೆ
ಮುನಿಸ ತೋರುತಿದೆ ಲೇಖನಿ ಸಿಕ್ಕಾಗಲೆಲ್ಲ ನಾ ಬರೆವ ಸೂಚನೆ
ಅದಕ್ಕೂ ನೋವಿರಬಹುದು ‌ಪದೇ ಪದೇ ಬರೆಯಲು ನೋವಿನ ನಿವೇದನೆ

- ಶ್ರೀಕಾವ್ಯ

16 Oct 2017, 07:03 pm
Download App from Playstore: