ಹೆಣ್ಣೆಂಬ 'ಪದಕೆ'
ಹೆಣ್ಣೆಂಬ 'ಪದಕೆ' ಅತೀ ಬೇಡಿಕೆ
ಅವಳ ಬಗೆಗೆ ಭಾಷಣಗಳಲಿ ಭಾರಿ ಹೊಗಳಿಕೆ
ಅವಳೇ ಆಗ ಜಗದಲಿರುವ ದೇವ ಕನ್ನಿಕೆ
ಮನದಲಿ ಹುಟ್ಟುವ ಕಾವ್ಯಕ್ಕೆಲ್ಲ ಅವಳೇ ಮಾಲಿಕೆ
ನಿಜದಲ್ಲಿ ಅನಿಷ್ಟಕ್ಕೆಲ್ಲ ಅವಳೆ ಕಾರಣ ಎಂಬ ಹೇರಿಕೆ
ಸಿಕ್ಕ ಸಿಕ್ಕಲೆಲ್ಲ ಅವಳ ಮೇಲೆ ಕಂತೆ ಕಂತೆ ತೆಗಳಿಕೆ
ಏತಕೆ ಮಾತಿನಲಿ ಅವಳ ಮೇಲೆ ಕಾಳಜಿಯ ತೋರಿಕೆ
ಇಟ್ಟಿದ್ದವೇನು ನಮ್ಮನ್ನು ಮಾತಲ್ಲಿ ಉದ್ದರಿಸಿರೆಂದು ಬೇಡಿಕೆ
ಬೇಡಿಬಂದಿಲ್ಲ ನಾವು ನೀವು ಕೊಡುವ ದೆವ್ವ ದೇವರ ಪಟ್ಟಕ್ಕೆ
ಮೀರಿ ಹೋಗಬಲ್ಲೆವು ಹೆಣ್ಣೆಂದು ಎಳೆದಿರುವ ಅಂಕೆ ಶಂಕೆ
ನಮ್ಮೊಳಗೂ ನೋವುಂಟು, ಇಡೀ ಜಗಕ್ಕೇನೆ ಹಂಚುವುದಕ್ಕೆ
ಕನಸು,ಕಣ್ಣೀರ ಕೂಡಿಟ್ಟು ಬದುಕುವೆವು ಇನ್ಯಾರ ನಗುವ ನೋಡುವುದಕ್ಕೆ
ಹೆಣ್ಣ ಮೇಲೆಯೇ ಎರಗುವರು ಯಾರುಯಾರದೊ ದ್ವೇಷಕ್ಕೆ
ಹೆಣ್ಣಿನ ಮಾನಹರಣವೆ ಸರಕಾಯಿತಲ್ಲ ಹಲವು ಯುದ್ಧ ಗೆಲುವುದಕ್ಕೆ
ಕೊಡುವರು ಸುಖದುಃಖ, ಕಷ್ಟನಷ್ಟ, ಏಳುಬೀಳು ಎಲ್ಲದಕ್ಕೆ ಮೂಲವೆಂಬಂತೆ ಹೋಲಿಕೆ
ಅವಳಾಗಿರುವಳು ಆಡಲು ಸಿಗುವ ಕಾಲ್ಚೆಂಡಿನಂತೆ ಏತಕೆ
ನಿಮ್ಮಲ್ಲಿ ನಮ್ಮೆಲ್ಲರದ್ದು ಒಂದು ಸಣ್ಣ ಕೋರಿಕೆ
ನಮಗಿಲ್ಲ ದೇವರು ದೇವತೆಯಂಬ ಪಟ್ಟದ ಬಯಕೆ
ಬೆಳಕಿಲ್ಲದ ಕತ್ತಲೊಳಗೆ ಪೂಜಿಸದರೆ ಹೊಗಳಿದರೆ ಸಾಕೆ
ಸಾಕೆಮಗೆ ನೀವು ಹೆಣ್ಣಿಗೂ ಮಾನವಳ ಸ್ಥಾನ ನೀಡಿ ತೋರಿದರೆ ಹೆಗ್ಗಾರಿಕೆ
- ಶ್ರೀಕಾವ್ಯ
17 Oct 2017, 11:56 am
Download App from Playstore: