ಭಿನ್ನ ಭಾವ ಬದುಕು

ನೀನು‌‌‌‌ ಎಂದಿಗೂ ನೀನೆ
ಅವನು ಎಂದಿಗೂ ಅವನೆ
ಅವಳು ಎಂದಿಗೂ ಅವಳೆ
ಏತಕೆ ‌ಇಲ್ಲ‌ಸಲ್ಲದ ರಗಳೆ

ಅವನೂ ನಿನ್ನಂತಯೇ ಇರಬೇಕೆಂದರೆ ಆಗಲಾರ
ನೀನು ಇನ್ಯಾರಂತೋ ಆಗಬೇಕೆಂದರೆ ನಿನಗೇ ಭಾರ
ಒಬ್ಬರಿಗಿಂತ ‌ಇನ್ನೊಬ್ಬರ ಭಾವ ಬದುಕು ಭಿನ್ನ ಭಿನ್ನ
ಭಿನ್ನತೆಯ ಒಪ್ಪಿ ‌ಅಪ್ಪಿ ನಗುತ ಬದುಕಿದರೇನೆ ಚೆನ್ನ

ಎಲ್ಲರ ಭಾವ ಬದುಕು ಒಂದೇ ಆದರೆ ಜೀವನ‌ ‌ಬಲು‌ ನೀರಸ
ನಗು‌ತ ಬದುಕುವುದು‌ ಲೇಸು ಸೇರಿಸಿ ಕೊಂಚ ಸರಸ‌‌ ವಿರಸ‌
ಎಲ್ಲರನ್ನೂ ಅವರಂತೆಯೇ ಒಪ್ಪಿ ಬದುಕಿದರೇನೆ‌ ಸುಂದರ
ಇಲ್ಲ‌ ‌ಬಾಳಾಗುವುದು‌ ನೋವು‌‌ ಕೋಪ‌ ತಾಪಗಳ ಹಂದರ

ನೋವಲಿದ್ದರೆ ಸಂತೈಸಿ‌ ಆದರೆ ಕೊಂಚ ಅಪ್ಪಿ‌
ಆಗಲಿಲ್ಲವೆ ಮಾತನು ಆಡಬಾರದು ಅಪ್ಪಿ‌ ತಪ್ಪಿ
ಸಾಧ್ಯವಿದ್ದರೆ ನಗಿಸಿದರೆ ಚೆಂದ ನುಂಗಿ ನೋವ
ನಗುವ ತರಲಾಗದಿದ್ದರು ತರಬಾರದು‌ ನಗುವಿಗೆ ಸಾವ

ಇಷ್ಟವಾದರೆ ನಡೆದು ಬಿಡಬೇಕು ಜೊತೆಜೊತೆಗೆ
ಕಷ್ಟವಾದರೆ ಬಿಟ್ಟುಬಿಡಬೇಕು ಅವರಿಚ್ಛೆಯ ದಾರಿಗೆ
ಮನಸಿರದೆ ಮಾತಾಡಿ ಬರೆಯುವದೇಕೆ ಜಗಳಕೆ ಮುನ್ನುಡಿ
ಮತ್ತೊಟ್ಟಿಗೆ ಸೇರಿಸಲಾಗುವುದೆ ಒಮ್ಮೆ ಒಡೆದೋದ ಕನ್ನಡಿ

- ಶ್ರೀಕಾವ್ಯ

28 Oct 2017, 05:29 pm
Download App from Playstore: