ಇಂತಿ ಚಿರವಿರಹಿ

ಬಿಸಿಲ ಮರೆತ ಮನಕೆ
ಚಳಿಯ ಕೊರೆತ ಶುರುವಾಗಿದೆ
ನೆನ್ನೆಯೆಂಬ ಚಿಂತೆಗೆ
ನಾಳೆಯೆಂಬ ಚಿತೆ ಜೊತೆಯಾಗಿದೆ
ವಿರಹದಿ ಹರಿದ ಹೃದಯಕೆ
ಒಲವ ನೂಲಿನ ಕೊರತೆ ಇದೆ
ಕಡಲ ದಡದ ಉಸುಕಿಗೆ
ಅಲೆಯ ಕಣ್ಣೀರು ತಿಳಿದಿದೆ |೧|

ಮೋಡವ ಮರೆತ ಹನಿಗಳಿಗೆ
ಸೂರ್ಯನ ಸೆಳೆತ ಶುರುವಾಗಿದೆ
ಮಾತನು ತೊರೆದ ಮನಸಲಿ
ಮೌನದ ಮೊರೆತ ಮಾರ್ಧನಿಸುತ್ತಿದೆ
ಕೆಲವು ದಿನಗಳ ಸಂತೋಷವು
ಹಲವು ದಿನಗಳ ಸಂತಾಪವ ಬಯಸಿದೆ
ದಾರಿ ಕಾಣದೆ ಕಂಗಾಲಾದ ಹಡಗಿಗೆ
ಕಡಲ ಸುಳಿಯ ಒಡಲು ಆಹ್ವಾನ ನೀಡಿದೆ |೨|

ಕಂಗಳ ಅಂಗಳ ತೋಯ್ದಿರಲು
ನೋವಿನ ಮೋಡದಿ ಇಳಿದ ಕಣ್ಣೀರೇ ಕಾರಣವಾಗಿದೆ
ಸಾವಿರ ಸ್ವಪ್ನಗಳ ಸೆರೆಯೊಳಗೆ
ಜೀವವು ಜೀವಾವಧಿ ಸಜೆಯ ಅನುಭವಿಸಬೇಕಿದೆ
ನೆನಪ ನಾವೆಯ ನಾವಿಕ ನಾನಾಗಲು
ಕಾಲದ ಕಡಲು ನನ್ನ ಸಾವ ಸವಿಯಲು ಸಜ್ಜಾಗಿದೆ
ಅಲೆಯ ರಭಸಕೆ ದಡ ಸೇರಿದ ಮೀನಿಗೆ
ಕಡಲಿನ ಕುಟಿಲತೆ ಈಗಷ್ಟೇ ತಿಳಿಯಬೇಕಿದೆ |೩|

- ಅಕವಿ

29 Oct 2017, 08:39 pm
Download App from Playstore: