ನಿಸರ್ಗಾಲಾಪ

-- ನಿಸರ್ಗಾಲಾಪ --

ಮಾನವ...!
ಸೃಷ್ಟಿ ನಾನು ಪವಿತ್ರೆ ನಾನು
ಕೇಳಬೇಕಿದೆ ನಿನ್ನನು
ನಾ ಮಾಡಿದ ತಪ್ಪೇನು?

ಜಗತ್ತನ್ನಾಳಲೆಂದು
ಪಣವಿಟ್ಟದ್ದು ನನ್ನನ್ನೇನು!?
ಎಷ್ಟು ನಂಬಿದ್ದೆನಲ್ಲ...
ಕಣ್ಣಲ್ಲಿ ಕಣ್ಣಿಟ್ಟು ಕಾದಿದ್ದೇ...!

ವನ ಮಹೋತ್ಸವದಲಿ ಕಂಡ
ಅಪಾರ ಪ್ರೀತಿಗೆ ಮನಸ್ಸೋತಿದ್ದೆ,
ವನ ಮೃಗಗಳಿಂದ ಕೇಳಿ ನಿನ್ನ
ಗುಣಗಾನ; ನನ್ನನ್ನೇ ನಾ ಮರೆತಿದ್ದೆ,

ದುರ್ಮತಿಯ ಮಾತುಕೇಳಿ
ಕೊಡಲಿ ಹಾಕಿದೆಯಲ್ಲವೇ ನನಗೆ!
ನಿನ್ನ ಕಂಡು ಎಷ್ಟು ದುಃಖಿಸಿದೆ ಗೊತ್ತೇ;
ನನಗಾಗಿ ಅಲ್ಲ, ನಿನಗಾಗಿ!

ಬೇಡುವ ಮೊದಲೇ ಜೀವನೀಡಿದೆ,
ಗಳಿಸಿದ ಸಿರಿಯನೆಲ್ಲ ನಿನಗೇ ಧಾರೆಯೆರೆದೆ,
ರಕ್ಷಿಸೆನ್ನಲು ಕೈ ಹಿಡಿದೆ,
ಎಷ್ಟೋ ಕಷ್ಟಗಳಿಂದ ಪಾರುಮಾಡಿದೆ

ನೀ ಬದುಕಲು ನಾ ಬದುಕಬೇಕು,
ನಾ ಸಾಯಲು ನೀ ಸಾಯಲೇಬೇಕು,
ನನಗಾಗಿ ಅಲ್ಲವಾದರೂ,
ನಿನಗಾಗಿ ನನ್ನನು ಉಳಿಸಿಕೊ!

ಕಾಡಲಿಲ್ಲ,
ಬೇಡಲಿಲ್ಲ,
ಇನ್ನೂ ಏನನ್ನೂ ಕೇಳುವುದಿಲ್ಲ,
ಒತ್ತಾಯವೂ ಮಾಡುವುದಿಲ್ಲ!

-- ಕೊಟ್ರೇಶ ಭೂತಿ

- Kotresh Bhuti

30 Oct 2017, 02:36 pm
Download App from Playstore: