ಮುಟ್ಟು

ಚೆಲುವಾದ ಬಾಲ್ಯಕ್ಕೆ ಬಲು ದುಃಖದಿ ನಾಂದಿ ಹಾಡಿ
ಹರೆಯಕ್ಕೆ ಕಾಲಿಟ್ಟೆ ಈ ಮುಟ್ಟು ನನ್ನ ಮುಟ್ಟಿದ ಕಾರಣಕ್ಕಾಗಿ.

ಹೆಣ್ಣೆಂದು ಹೊನ್ನಂತೆ ನೋಡುವುದ ಬಿಟ್ಟು ಮುಟ್ಟಾದೇನೆಂದು ಮನೆಯಿಂದ ಹೊರಹಾಕಿ ಭಿಕ್ಷುಕರ ಬಟ್ಟಲಿಗೆ ಅರೆಅಗಳು ಎಸೆದಂತೆ ಎಸೆದು ಕೊರೆವ ಚಳಿಯಲ್ಲಿ ಮಲಗೆಂದು ದೂರ ನೂಕಿದರು ಅಂಟೆಂದು ನನ್ನ ಉಸಿರು ಸೋಕಿದರೆ.

ತಾಯ್ತನದ ಸವಿ ಸುದ್ದಿ ಊರೆಲ್ಲಾ ಜೈಕಾರ ಹಾಕಿ ಹೇಳುವ ಈ ಸಭ್ಯ ಜನರು ಏತಕ್ಕೆ ನನ್ನನ್ನು ಮುಂದಾಗುವ ಒಂದು ತಾಯಿಯೆಂದು ನೋಡಲಾರರು ನನ್ನ ತಮ್ಮಂತೆ ನಾನು ಒಂದು ಜೀವಿಯೆಂದು ಕಾಣಲಾರರು.

ಮನೆಯ ಸಿರಿ ನಾನಂತೆ ಮನಸ ಮಮತೆಗೆ ಮತ್ತೊಂದು ಹೆಸರು ಸ್ತ್ರೀಯಂತೆ ?
ಮಗಳೊಂದು ಮುದ್ದಾದ ಗೊಂಬೆ
ಪ್ರೇಯಸಿಯು ಹೃದಯದರಸಿ ತಾಯಿಯೇ ಸೃಷ್ಟಿಗೆ ಮೂಲಾಧಾರ ಮಾತಿಗೇನಾ ಇವೆಲ್ಲ ಮೆಚ್ಚುಗೆಯ ಪ್ರಶಂಸೆಪಡೆಯಲೆಂದು.

ಹೆಣ್ಣೊಂದು ಮುಟ್ಟಾಗದೆ ಮಗುವೊಂದು ಹುಟ್ಟುವುದೇನು ?
ಅವಳ ನೋವೆಲ್ಲಿ ತಿಳಿವುದು ಈ ಪುರುಷ ಪ್ರಾಧಾನ ಪ್ರಪಂಚಕ್ಕೆ ಅವನು ಕೂಡ ಜೀವ ಪಡೆವುದು ಒಂದು ತಾಯಿಯ ಗರ್ಭದಲ್ಲೇ.

ತನ್ನ ರಕ್ತ ಮಾಂಸ ಶಕ್ತಿಯನ್ನೆಲ್ಲವು ಧಾರೆ ಎರೆದು ಜೀವ ಕೊಡುವಳು ತಾನು ಸತ್ತು ಮಗುವ ಬದುಕಿಸಿ ಮತ್ತೆ ಪುನರ್ಜನ್ಮ ತಾಳುವಳು ಈ ತಾಯಿ.

ಮನದಲ್ಲಿ ಮಡುಗಟ್ಟ ನೋವು ಮಾತಲ್ಲಿ ಹೇಳಿದರೆ ನಾವು
ಅರಿತೂ ಅರಿಯದಂತೆ ಮುಂದೆಕೇ ಸಾಗುವಿರಿ ನೀವು.

ನಾಚಿಕೆಯ ಮರೆಯಲ್ಲಿ ಮುಚ್ಚಿಡುವೆವು ನಮ್ಮಲ್ಲಿನ ವ್ಯಥೆಯೆಲ್ಲಾ ತಿಳಿಸಿದರೆ ಮತ್ತೆ ನೀವು ಕೇಳುವ ನಿಲ್ಲಲಾರದ ನೂರು ಪ್ರಶ್ನೆಗಳಿಗೆ ಉತ್ತರಿಸಲಾರೆವೆಂದು.

ಹುಟ್ಟಿಗಿರುವ ಮುಟ್ಟು ಸಾವಿಗಿರುವ ಅಂಟು ಮಧ್ಯದಲ್ಲಿ ನಡೆಸುವ ಜೀವನಕ್ಕೆ ಏತಕಿಲ್ಲ ಹೇಳಿ ನೀವೇ ನೊಂದಿಹೆನು ನಾನು ನಾನಿಂದು ಒಂದು ಹೆಣ್ಣೆಂದು.

- ಚುಕ್ಕಿ

31 Oct 2017, 06:45 pm
Download App from Playstore: