ಬೆಸೆದ ಕೈಗಳು...
ಹಿಂತೆಗೆಯದಿರೆ ನನ್ನ ಚೆಲುವಿ
ನನ್ನ ಕೈಯೊಳಿರುವ ನಿನ್ನ ಮೃದು ಕೈಯನು
ಮಾತೊಂದು ಆಡದಿದ್ದರೂ
ಆಡುತಿಹವಲ್ಲೇ ಬೆರಳು ನೂರು ಮಾತನು.
ಕಂಡೆ ಕವಿ ಹಾಡಿ ಹೊಗಳಿದ
ಬಂಗಾರವಿಲ್ಲದ ಬೆರಳನು,
ಕಣ್ತುಂಬಿಕೊಂಡೆ ಸಿಂಗಾರವಿಲ್ಲದ
ನಿನ್ನ ಕೈ ಉಗುರದ ಹೊಳಪನು.
ಬೆಸೆದು ಅಂಗೈ ಒಳಗೆ,
ನುಸಿದು ಬಂದಿಯಾದವೋ
ಮುನಿಸು ತೋರದ ಮೃದು ಕೈ ಬೆರಳು.
ಕನಸ ಹೊಸೆಯಿತೋ,
ಮನಸ ಬೆಸೆಯಿತೋ,
ಸಂತಸವ ತಂದಿತ್ತ ಆ ನಿನ್ನ ಕರವು.
ಹಿಂತೆಗೆಯದಿರೆ ಹುಡುಗಿ,
ಮತ್ತೊಮ್ಮೆ ಬೇಡುವೆನು
ನಿಂತು ಹೋದೀತು ಹೇಳದೆ ನನ್ನುಸಿರು.
ಕುಂತುಕೊಂಡಿರುವಾಗ
ಚಿಂತೆಯನು ಮರೆತಾಗ
ಮತ್ತೆ ಮರಳುವುದೇಕೆ ನಿಟ್ಟುಸಿರು.
ಕೈ ತುತ್ತನಿಟ್ಟ ಕೈ
ಭಾವನೆಗಳ ಬರೆವ ಕೈ
ಭಾವನೆಗಳಿಗೆ ಬಣ್ಣ ಹಚ್ಚಿದ ಕೈ ಮುಗಿಲಿದ್ದಂತೆ.
ಅದ ನಾನು ಹಿಡಿದಿರಲು
ಅನಿಸುವುದೆನಗೆ ಲೋಕವನೆ ನಾನು
ಕೈಯೊಳು ಹಿಡಿದಿಟ್ಟಂತೆ!
- ಶ್ರೀಗೋ.
07 Nov 2017, 06:30 am
Download App from Playstore: