ಬದುಕು ಓಡೋ ಬಂಡಿ

ಬದುಕು ಮೂರು‌ ದಿನ ಓಡೋ ಬಂಡಿ
ಏತಕ್ಕೆ ಬಾಳಲಿ ಇಲ್ಲಸಲ್ಲದ‌ ಗಂಡಾಗುಂಡಿ
ಬದುಕಬೇಕು ಅಳು ನಗು ಎರಡು ಉಂಡಿ
ಜೀವನ ಆಟವಲ್ಲ ಬೇಡವೆಂದು ಹಿಡಿದರೆ ಚಂಡಿ

ತಪ್ಪಾಗಿಗಾಗಿ ಯಾರು ಬೆರಳು ತೋರದಂತೆ ಬದುಕು
ಬೆರಳು ತೋರಿದರೂ ಅದಾಗಿರಲಿ ಹೆಮ್ಮೆಯ ಮೆಲುಕು
ಸತ್ತಾಗ ಹೋಗುವುದು ಖಾಲಿ ಕೈಯ ದೂರ ಪ್ರಯಾಣ
ಸಿಗುವ ಪ್ರೇಮವ ಬಿಟ್ಟು ಓಡವುದೇಕೆ ಹುಡುಕಿ ಕಾಂಚಾಣ

ನಗಿಸಿ ನಗುತ ಬಾಳುವುದೇ ಅಂತೇ ನಿಜ ಪರಮಧರ್ಮ
ನೋವು ಕಣ್ಣೀರ ಕೊಟ್ಟು ಉಣ್ಣವುದು ಬೇಡ ಪಾಪಕರ್ಮ
ಕಷ್ಟಕಂಡಾಗ ಜೊತೆಯಾಗಬೇಕು ಕೊಂಚ ಕೈಯ ಚಾಚಿ
ಕಳೆದುಕೊಳ್ಳಲೇನಿಲ್ಲ ನೋವಿಗೆ ಹೆಗಲಾದರೆ ತನುವ ಬಾಚಿ

ಮನಸಲಿರದಿರಲಿ ಮದ ಮತ್ಸರ ಕಾಮ ಕ್ರೋಧ ಮೋಹ ಲೋಭ
ನಗುತಲಿ ಮಾತಾಡಿದರೆ ಸಿಗುವುದು ಮನಸ ಗೆದ್ದ ಲಾಭ
ಸಾಗಲೇಬೇಕು ಬದುಕಬಂಡಿ ಹಿಡಿದು ಏಳುಬೀಳುಗಳಾದಿ
ಅದರ ಮಧ್ಯೆ ಏತಕಸೂಯೆ ದ್ವೇಷಕಾಗುವುದು ಪರರಿಗೆ ದಾಯಾದಿ

ಸಿಗದಕ್ಕೆ ಹಂಬಲಿಸಿ ಕೊರಗದೆ ನಕ್ಕು ಬಾಳಲಾಗಬೇಕು ಬದ್ಧ
ತೃಪ್ತಿ ಸಂತಸದಿ ನಗುತ ಬದುಕುವುದೆ ಜೀವನವೆಂದ ಬುದ್ಧ
ಇದ್ದರೂ ಜಗದಲಿ ಇಲ್ಲದಂತೆ ಬದುಕಿದರೆ ಜೀವನ ನಿರರ್ಥಕ
ಸತ್ತ ಮೇಲು ಸವಿ ಕಥೆಯಾಗುವಂತೆ ಬದುಕಿದರೆ ಸಾರ್ಥಕ

- ಶ್ರೀಕಾವ್ಯ

12 Nov 2017, 10:24 pm
Download App from Playstore: