ಸುಮ್ಮನೇ ಬಳಿಗೆ ಬಾ

ಸುಮ್ಮನೇ ಬಳಿಗೆ ಬಾ
ಹೆಗಲಿಗೆ ಹೆಗಲೊರಗಿಸು ಬಾ
ಮರೆಯುತ ಜಗವನು
ಕಾಣುವ ಸವಿಗನಸನು

ಉತ್ತರವೇ ಇಲ್ಲದ
ಪ್ರಶ್ನೆಗೆ ಸುಳಿವಾದೆ ನಾ
ಇಂದು ನೀನೊಲಿದ ಈ ಕ್ಷಣ
ತೇಲಾಡಿದೆ ನನ್ನೀ ಮನ

ಬೆಳಕೇ ಬಾರದ
ರಾತ್ರಿಯ ಈ ವೇಳೆಲಿ
ಸೂರ್ಯ ಬರುವ ತನಕ
ನೀನು ನೀಡು ಬೆಳಕ

ಹಕ್ಕಿಗಳೇ ಇಲ್ಲದ
ಮರದಂಚಿನ ಗೂಡಲಿ
ಮೌನವ ಮುರಿದು ಬಾ
ಕಲರವ ನೀನಾಗು ಬಾ

ಮೋಡಗಳೇ ಇಲ್ಲದ
ತಿಳಿನೀಲಿ ಆಕಾಶದಿ
ಮಳೆಯನು ಸುರಿಸು ಬಾ
ನನ್ನೆದೆಯನು ತಣಿಸು ಬಾ

ಅಕ್ಷರಗಳೇ ಇಲ್ಲದ
ಖಾಲಿ ಹಾಳೆಯಲಿ
ಎಲ್ಲಿ ನೀ ಅವಿತೆ
ನೀನೆ ಸುಂದರ ಕವಿತೆ

ಒಂಟೀ ಹಡಗಿನಲಿ
ಭೋರ್ಗರೆವ ಸಮುದ್ರದಿ
ನನಗೆ ದಾರಿಯ ತೋರೆ
ಆಗಿ ನೀ ಧ್ರುವತಾರೆ

ಎತ್ತರದಾ ಶಿಖರದಲಿ
ಉತ್ತರದ ದಿಶೆಯಲಿ
ಸುಂದರ ಹೂವು ನೀ
ನನ್ನ ಪ್ರಾಣ ಉಳಿಸೋ ಸಂಜೀವಿನಿ

ಪ್ರೀತಿಯ ಸಂತೆಯಲಿ
ಕನಸಿನ ಚಿಂತೆಯಲಿ
ನೀ ಸ್ವಪ್ನ ಸುಂದರಿ
ನಾ ನಿನಗೆ ಆಭಾರಿ

ಬಳುಕಿದ ಬಳ್ಳಿಯಲಿ
ಅರಳಿದ ಹೂವಿನಲಿ
ಅಡಗಿರುವ ಮಕರಂದ ನೀ
ಸೌಗಂಧದ ನಿಧಿಯು ನೀ

- ಅಕವಿ

13 Nov 2017, 08:49 pm
Download App from Playstore: