ಮುದ್ದು ಕರುವಿನ ಕತೆ

ದಟ್ಟ ಕಾನನದಲ್ಲಿ ದಿಕ್ಕೆಟ್ಟ ಕರುವೊಂದು
ಎತ್ತತ್ತಲೋ ಸಾಗಿ ನಡೆದಿದ್ದಿತು.
ತನ್ನವರಾರೆಂದು ಅರಿಯದೆ
ತಿಂಬುವರಾರೆಂದು ತಿಳಿಯದೆ
ದಾರಿ ಕಂಡೆಡೆಗೆ ನಡೆದಿದ್ದಿತು.

ಒಂಟಿ ಕರುವನು ಕಂಡು
ಅಂದ ಚೆಂದವನು ಉಂಡು
ತೇಗಿ ಬಿಡುವೆವೆನುತ
ಹೊಂಚು ಹಾಕಿದವಾಗಲೇ
ನಾಯಿ ನರಿ ತೋಳಗಳ ಹಿಂಡು.

ಮುಖವಾಡ ಧರಿಸಿದವು
ನಯವಾಗಿ ನಟಿಸಿದವು
ಸಭ್ಯ ಗೆಳೆಯರೆನುತ
ಗೆಳೆತನವ ಗಳಿಸಿದವು.

ಕಪಟವನರಿಯದ ಕರು
ಜೊತೆಯಲ್ಲೇ ಸಮಯ ಸಾಧಕರು
ಮುಖವಾಡಗಳನು ಧರಿಸಿ
ಸಮಯಕ್ಕೆ ಕಾದಿಹರು.

ಒಂದೊಂದೇ ನರಿ ತೋಳ
ಹಾಕತೊಡಗಿದವು ಗಾಳ
ಕರುವಿನ ಸುತ್ತ ವಂಚಕರ ಜಾಲ
ದಿಕ್ಕೆಟ್ಟು ನಿಂತಿತಾ ಕರು ಇದು ಕಲಿಗಾಲ.

ಹೇಗೋ ತಪ್ಪಿಸಿಕೊಂಡು
ನುಸುಳಿ ಓಡಿ ದಿಗಿಲುಗೊಂಡು
ಬಂದು ನಿಂತಿತು ಕರುವು
ಹೆಬ್ಬುಲಿಯ ಎದುರುಗೊಂಡು!

ಒಂಟಿ ಹೆಬ್ಬುಲಿಯದು
ದುಷ್ಟ ನರಿ ತೋಳಗಳ ಕಂಡು
ಗರ್ಜಿಸಿತೊಮ್ಮೆ ಗಂಡು
ಓಡಿತು ದುಷ್ಟ ಕೂಟಗಳ ಹಿಂಡು.

ಮುದ್ದು ಗರುವನು ಕಂಡ ಹುಲಿ
ಮುದ್ದುಗರೆಯಿತು ಪ್ರೀತಿಯಲಿ
ಅಪ್ಪಿ ಮುತ್ತಿಟ್ಟು ಕರೆದೊಯ್ದು
ಸಂತೈಸಿತು ತನ್ನ ಗುಹೆಯಲ್ಲಿ.

ನೆಕ್ಕಿ ನೀಡಿತು ಕರುವು
ಅಕ್ಕರೆಯ ಸಕ್ಕರೆಯ ಕ್ಷಣವ,
ಪ್ರೀತಿ ಕಾಣದ ಹುಲಿಯು
ಕಂಡುಕೊಂಡಿತು ಕರುವಲ್ಲಿ ಹೊಸ ಲೋಕವ.

ಹುಲಿಯ ಜೊತೆಯೇ ಬೆರೆತ ಕರು
ಮರೆಯಿತೊಂದಿಷ್ಟು ಹಳೆಯ ನೆನಪಿನ ಒಗರು
ಕಳೆಯಿತು ಕೆಲವು ದಿನ
ಹುಲಿಯ ತಂದೆ ಪ್ರೀತಿಯಲ್ಲಿ.

ಹೀಗಿರಲು ಒಂದು ದಿನ
ಅರಿಯದೆ ಹುಲಿಯುಗುರು
ಪರಚಿ ಬಿಟ್ಟಿತು ಕರುವ
ಯಾವುದೋ ಯೋಚನೆಯಲಿ.

ಹುಲಿ ಪರಚಿದುದನು ಕಂಡು
ಬೆಚ್ಚಿ ಬಿದ್ದಿತು ಮುದ್ದು ಕರು
ಹುಲಿ ಕೂಡ ಪರರಂತೆ
ಸುಳ್ಳು ನುಡಿದಿಹುದೆಂದು,
ನೊಂದು ದಿಗಿಲ್ಗೊಂಡು
ಹುಲಿ ಸಂಗ ಬೇಡವೆಂದುಕೊಂಡು
ಹೊರ ನಡೆಯಿತು ಕುರುವು
ಹುಲಿ ಪ್ರೀತಿಯ ತೆರವು.

ತನ್ನ ಅಚಾತುರ್ಯಕ್ಕೆ
ತನ್ನನೆ ಹಳಿದುಕೊಂಡ ಹುಲಿ
ಮರುಗಿತು ಕೊರಗಿತು
ಪ್ರೀತಿ ದುರಾಗುವುದ ಕಂಡು
ಕುಸಿದು ಕುಳಿತಿತ್ತು.

ಬೇಡಿತು ಕರುವನ್ನು
ಬಿಟ್ಟು ಹೋಗದಿರು ಎಲೆ ಮುದ್ದೇ
ಕಪಟವರಿಯೆನು ನಾನು
ಕಳೆದುಕೊಂಡು ನಿನ್ನ ಬದುಕಿರುವೆನೇನು ?

ಹುಲಿಯ ಪ್ರಾಮಾಣಿಕತನವನು ಕಂಡು ಕರು
ತಾನು ನೊಂದುಕೊಂಡು ಹಾಕಿತು ಕಣ್ಣೀರು
ಮರಳಿ ಬಂದು ಬಿಗಿದಪ್ಪಿತು ಹುಲಿಯ
ಹೆಬ್ಬುಲಿ ಬಿಟ್ಟಿತು ನೆಮ್ಮದಿಯ ನಿಟ್ಟುಸಿರು!

- ಶ್ರೀಗೋ.

15 Nov 2017, 02:46 am
Download App from Playstore: