ನಿನ್ನ ಹೆಸರು..!

ಈ ಬಾಳ ಬಿಳಿಯ ಹಾಳೆಯಲಿ
ಚೆಲುವೆ ನಿನ್ನದೇ ಹೆಸರು!
ಬಾಳ ಸಂಪುಟದ ಪುಟಗಳಲಿ
ನಿನ್ನ ನೆನಪದು ಸದಾ ಹಸಿರು!

ಮುಂಜಾನೆ ಹಕ್ಕಿ-ಕಲರವದಲು
ಹಸಿರೆಲೆಯ ಇಬ್ಬನಿ ಮುತ್ತಿನಲು
ರವಿಯ ಹೊನ್ನ ರಶ್ಮಿಯಲು
ತೆರೆದ ಹೂವಿನೆದೆಯಲು ನಿನ್ನ-ಹೆಸರು!

ಸಂಜೆ ಮುಗಿಲ ಬೆಳ್ಳಕ್ಕಿ ಸಾಲಿನಲು
ಭುವಿಯ ಗೋಧೂಳಿ ಕೆಂಪಿನಲು
ಮೇಘಮಾಲೆಯ ಚಿತ್ತಾರದಲು
ತಂಪಿಡುವ ತಂಗಾಳಿಯಲು ನಿನ್ನ-ಹೆಸರು!

ಕಾರಿರುಳ ಅಂಧಕಾರದ ನೀರವತೆಯಲು
ಮಿನುಗಿ ಹೊಳೆವ ನಕ್ಷತ್ರರಾಶಿಯಲು
ನಗುವ ಶಶಿಯ ಶೀತಲಕಿರಣಗಳಲು
ದೀಪಗಳ ಬೆಳಕು ಕಾರಂಜಿಯಲು ನಿನ್ನ-ಹೆಸರು!


ಓದಲು ತೆರೆದ ಹೊತ್ತಿಗೆಯಲ್ಲು
ನಿದ್ರೆತುಂಬಿದ ಕಂಗಳ ರೆಪ್ಪೆಯಡಿಯಲ್ಲು
ಹಾಡುತ್ತಾ ಬರುವ ನಿನ್ನ-ಹೆಸರು
ನನ್ನ ಉಸಿರಲ್ಲೆ ನಿದ್ರಿಸಿ
ಮತ್ತೆ ಮುಂಜಾನೆ ಕನಸಲ್ಲು ಬಂದು
ಮುತ್ತಿಟ್ಟು ಮರುದಿನಕೆ ಶುಭಕೋರುವ
ದಿವ್ಯ ಮಂತ್ರವೇ ಗೆಳತಿ ನಿನ್ನ ಹೆಸರು

- ನಾಗರಾಜ್

17 Nov 2017, 09:15 am
Download App from Playstore: