ನಿನ್ನ ಮಡಿಲು !
ಮುದ್ದು ಹುಡುಗಿಯೇ ನಿನ್ನ ಮಡಿಲಲ್ಲಿ
ಮುಗ್ದ ಮಗುವಾಗಿ ನಾನೊಮ್ಮೆ ಮಲಗಿ ಬಿಡಲೇ ?
ಮರೆಸಿ ನನ್ನೆಲ್ಲ ತಾಪತ್ರಯಗಳ ಪಾಡು,
ಮಮತೆಯಲಿ ನೀನೊಮ್ಮೆ ಜೋಗುಳವ ಹಾಡು.
ಒಮ್ಮೆ ದೊರಕಿತಾದರೆ ಕೊಂಚ ಜಾಗ
ನಿನ್ನ ಮಡಿಲಲ್ಲಿ,
ಬಿಕ್ಷುಕನೊಬ್ಬನಿಗೆ ಸಿಕ್ಕಂತೆ ಬೆಚ್ಚನೆಯ ಜಾಗ
ದೇವರ ಗುಡಿಯಲ್ಲಿ.
ಹಣೆಯ ನೇವರಿಸು ಚೆಲುವೆ
ನಿನ್ನ ಮೃದು ಬೆರಳುಗಳಿಂದ,
ಹಣೆ ಬರಹವೆ ಬದಲಾದೀತು
ಕಣ್ಣು ತುಂಬಿ ಹೊಸ ಕನಸುಗಳಿಂದ.
ನನ್ನ ಕೆನ್ನೆ ಮೇಲೆ ನಿನ್ನ ಕೆಂದುಟಿಯ
ಸಿಹಿ ಮುದ್ರೆಯನೊತ್ತು,
ಕಣ್ಣು ಮುಚ್ಚಿ ವಿಹರಿಸಿ ಬರುವೆ
ಸ್ವರ್ಗದಲ್ಲಿ ಸ್ವಲ್ಪ ಹೊತ್ತು !
ನಿನ್ನ ಮಡಿಲೆನಗೆ ಆಗುವುದು
ಬಹು ಕೋಟಿ ಮಹಲು,
ನಿನ್ನ ಮಡಿಲಲ್ಲಿ ಮಗುವಂತೆ
ನಾ ಮುದುಡಿಕೊಂಡಿರಲು !
- ಶ್ರೀಗೋ.
20 Nov 2017, 06:16 am
Download App from Playstore: