ಗೋಸುಂಬೆಗಳು
ಗೋಸುಂಬೆಯ ತೆವಳು ನಿಂತಿಲ್ಲ
ಅದರ ಹೆಸರ ಕೊನೆಗೆ ಕ್ಷಣ ಕ್ಷಣಕ್ಕೂ ಕಣ ಕಣವು
ತನ್ನಲ್ಲೇ ತಾನು ಬದಲಿಸಿ ಹೆಜ್ಜೆ ಇಟ್ಟ ಜಾಗದಲ್ಲೇ
ಹೊಚ್ಚ ಹೊಸ ರೂಪ ಧರಿಸಿ ಮುಂದೆ ಸಾಗುವುದು
ಬಹುರೂಪಿಣಿ ಈ ಊಸರವಳ್ಳಿ.
ಹೊತ್ತಿಗೆ ತಕ್ಕಂತೆ ಗತ್ತು ಬದಲಿಸಿ
ಮಾತನಾಡುವವರನ್ನ ನೋಡಿ ನಾಚಿದೆ
ತಾನಿಂದು ಊಸರವಳ್ಳಿ,
ತನ್ನ ಮೈ ಬಣ್ಣಗಳಿಗಿಂತ ಹೆಚ್ಚು ವರ್ಣಗಳು
ಈ ಕುಲಗೇಡಿಗಳ ಕಲುಷಿತ ಮನಗಳಲ್ಲಿ
ಮುಸುಕು ಹಾಕಿ ಕುಂತಿವೆಯೆಂದು!
ಹಲ್ಲಿಯಾದರೂನು ಕೊಳ್ಳೆ ಹೊಡೆಯುವುದಂತೂ ಕಲಿತಿಲ್ಲ,
ಕ್ಷಣಕ್ಕೊಂದು ಅಂಗಿಯಂತೆ ಬದಲಿಸುವ
ಮಂದಿಯ ಗತಿಗೆಟ್ಟ ಮತಿಗಳಿಗೆ
ಮಾತೊಂದು ಬೇಕೇನು ?
ನಟನೆ ನಿಲ್ಲಿಸೆಂದು ಹೇಳಲಿಂದು!
ಪರಿಸರ ಸ್ನೇಹಿ ಈ ವಿವಿಧ ರೂಪಧಾರಿ
ಕ್ರಿಮಿ ಕೀಟಗಳನು ಉಂಡು ಜೀವಿಸುವುದು,
ಘೋರ ಕಟುಕರು ದುರ್ಜನರು
ತನ್ನೆದುರು ಬದುಕುವ ಮನುಜನ
ಭಾವನೆಗಳ ಸಿಹಿಯನು ಉಂಡು
ಕಠೋರ ವಿಷವನು
ಕಾಣಿಕೆಯಾಗಿ ಕೊಟ್ಟು ಹೋಗುವರು!
ಕುಂತ ಜಾಗದಲ್ಲೇ ಕತ್ತು ತಿರುಗಿಸದೆ
ಪರಿಸರ ಪರಿವೇಕ್ಷಣೆ ನಡೆಸುವುದು ಈ ಸರಿಸೃಪ,
ನೆತ್ತಿ ಹೆತ್ತಿ, ನಾಜೂಕು ಮಾತಾಡಿ
ಕಣ್ಣಲ್ಲಿ ಮಣ್ಣೆಸೆದು ಬೆಕ್ಕಿನಂತೆ ಜಾರುವುದು
ನಕಲಿ ನರರ ಕೈಚಳಕದ ಉಜ್ಜುಗದ ತದ್ರೂಪ ಮೂರು ಬಿಟ್ಟ ಅಪರೂಪ ಮಹಾನುಭಾವರ ಕೀರ್ತಿ ಕಾಣಿರಪ್ಪ!
- ಚುಕ್ಕಿ
02 Dec 2017, 12:47 pm
Download App from Playstore: