ಮೌನ ಭಂಗುರ

ನನ್ನ ನಲ್ಲೆಯ ಮುನಿಸು
ಮುಂಜಾನೆ ಹಸುರಡರಿ
ಮುತ್ತಂತೆ ಥಳ ಥಳಿಸೋ
ಹಿಮ ಬಿಂದುಗಳ ಸಾಲು
ಕೊಂಚ ಹರ್ಷದ ಬಿಸಿಲು
ವರ್ಷಿಸಲು ಮರೆಯಾಯ್ತು
ಸಂಚು ಅರಿಯದ ಮೊಗದಿ
ಸಂತಸದ ಹೊನಲು
ಮಾತಿನ ಮಾಟದಲಿ
ಹಮ್ಮು ಬಿಮ್ಮುಗಳಿಲ್ಲ
ಕೌತುಕದ ಕಂಗಳಲ್ಲಿ
ಆಹಮಿಕೆ ಇನಿತಿಲ್ಲ
ಲಜ್ಜೆಯ ಕದಪದೊಳು
ಉದಯಾಸ್ತ ರವಿ ರಂಗು
ಗೆಜ್ಜೆ ಬಳೆಗಳ ಧನಿಯೋ
ಕರ್ಣ ಸೆಳೆಯುವ ಗುಂಗು
ಬಚ್ಚಿಟ್ಟ ಭಾವಗಳ
ಬಿಚ್ಚಿ ಬಯಲಿಗೆ ತೂರಿ
ಹಚ್ಚಿದಳ ಎನ್ನೊಳಗೆ
ಹೊಸತನರಸುವ ದಾರಿ
ಆಗದೆಂಬ ಆಲ್ಪಮತಿ
ಅಂಜಿಕೆ ಕೊನೆಗೊಳಿಸಿ
ಸಾಧಕರ ಸಾಲಿನಲ್ಲಿ
ನಿಲ್ಲಿಸಿದಳೆನ್ನೆರಸಿ

- ಯು.ರಾಮು ಸಿರಿಗೆರೆ

03 Dec 2017, 09:11 pm
Download App from Playstore: