ನೀನು ಎಂದಿಗೂ ನೀನೆ
ಅವನು ಎಂದಿಗೂ ಅವನೆ
ಅವಳು ಎಂದಿಗೂ ಅವಳೆ
ಏತಕೆ ಇಲ್ಲಸಲ್ಲದ ರಗಳೆ
ಅವನೂ ನಿನ್ನಂತಯೇ ಇರಬೇಕೆಂದರೆ ಆಗಲಾರ
ನೀನು ಇನ್ಯಾರಂತೋ ಆಗಬೇಕೆಂದರೆ ನಿನಗೇ ಭಾರ
ಒಬ್ಬರಿಗಿಂತ ಇನ್ನೊಬ್ಬರ ಭಾವ ಬದುಕು ಭಿನ್ನ ಭಿನ್ನ
ಭಿನ್ನತೆಯ ಒಪ್ಪಿ ಅಪ್ಪಿ ನಗುತ ಬದುಕಿದರೇನೆ ಚೆನ್ನ
ಎಲ್ಲರ ಭಾವ ಬದುಕು ಒಂದೇ ಆದರೆ ಜೀವನ ಬಲು ನೀರಸ
ನಗುತ ಬದುಕುವುದು ಲೇಸು ಸೇರಿಸಿ ಕೊಂಚ ಸರಸ ವಿರಸ
ಎಲ್ಲರನ್ನೂ ಅವರಂತೆಯೇ ಒಪ್ಪಿ ಬದುಕಿದರೇನೆ ಸುಂದರ
ಇಲ್ಲ ಬಾಳಾಗುವುದು ನೋವು ಕೋಪ ತಾಪಗಳ ಹಂದರ
ನೋವಲಿದ್ದರೆ ಸಂತೈಸಿ ಆದರೆ ಕೊಂಚ ಅಪ್ಪಿ
ಆಗಲಿಲ್ಲವೆ ಮಾತನು ಆಡಬಾರದು ಅಪ್ಪಿ ತಪ್ಪಿ
ಸಾಧ್ಯವಿದ್ದರೆ ನಗಿಸಿದರೆ ಚೆಂದ ನುಂಗಿ ನೋವ
ನಗುವ ತರಲಾಗದಿದ್ದರು ತರಬಾರದು ನಗುವಿಗೆ ಸಾವ
ಇಷ್ಟವಾದರೆ ನಡೆದು ಬಿಡಬೇಕು ಜೊತೆಜೊತೆಗೆ
ಕಷ್ಟವಾದರೆ ಬಿಟ್ಟುಬಿಡಬೇಕು ಅವರಿಚ್ಛೆಯ ದಾರಿಗೆ
ಮನಸಿರದೆ ಮಾತಾಡಿ ಬರೆಯುವದೇಕೆ ಜಗಳಕೆ ಮುನ್ನುಡಿ
ಮತ್ತೊಟ್ಟಿಗೆ ಸೇರಿಸಲಾಗುವುದೆ ಒಮ್ಮೆ ಒಡೆದೋದ ಕನ್ನಡಿ
ಕನಸುಗಳು ಸಾಗುತ್ತಿವೆ
ನಾ ಕಾಣದ ಹಾದಿಯಲ್ಲಿ..
ವಿವಿಧ ವೇಷಧಾರಿಗಳು
ನಿಂತಿಹರು ಸುತ್ತುವರೆದು
ಭಯದಿಂದ ನಡುಗುತ್ತಿದೆ ದೇಹ...
ಯಾರಿಲ್ಲ ನನ್ನವರು ಇಲ್ಲಿ
ಯಾರೆಂದು ತಿಳಿಯುತ್ತಿಲ್ಲ ಇವರೆಲ್ಲ....
ನನಗ್ಯಾವ ಶಿಕ್ಷೆಯ ಕೊಡುವರು
ತಪ್ಪು ಮಾಡದ ನನಗಿಂದು..
ಯಾರಲ್ಲಿ ಪ್ರಶ್ನಿಸಲಿ ನಾನು
ಕರುಣೆಯಿಲ್ಲದ ಈ ಜನರ ಮಧ್ಯೆ...
ಕತ್ತಲು ಮತ್ತಷ್ಟು ಸಮೀಪಿಸಿದೆ
ಯಾರೋ ಹೊತ್ಯೊತ್ತಿದ್ದಾರೆ ನನ್ನನು...
ಕಣ್ತೆರೆಯಲು ಭಯ ನನಗೆ
ಎಲ್ಲರ ಜೊತೆ ಸೆಣಸಾಡಿ
ಬಂಧನವ ಬಿಡಿಸಲು
ಬಂದುಬಿಡು ನೀನೊಮ್ಮೆ!
ನಿನ್ನ ಮುದ್ದು ಕಣ್ಗಳ ನೋಟಕೆ
ಬೆರಗಾಗಿಹೋದೆನಲ್ಲಾ
ಮನಸ್ಯಾಕೋ ಹಠವ ಮಾಡುತ್ತಿದೆ
ನಿನ್ನ ಸನಿಹವ ಬೇಡುತ್ತಿವೆ
ನನ್ನ ಮನದಿಂಗಿತವ ಕೇಳೊಮ್ಮೆ
ಮೌನವ ಸರಿಸಿಬಿಡು ಒಮ್ಮೆ
ಹುಚ್ಚು ಹೃದಯದ ತುಂಬೆಲ್ಲ
ನೀನೇ ತುಂಬಿಕೊಂಡಿರುವೆಯಲ್ಲ
ನೀ ನನ್ನ ಮರೆತರೂ
ಮರೆತೂ ನಾ ಮರೆಯಲ್ಲ
ನಿನ್ನ ಆ ಮುಗ್ಧ ನೋಟವನ್ನ!