Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಎಲ್ಲಿರುವೆ ಸುಂದರಿ ಎಲ್ಲಿರುವೆ?
ದಿನವು ನನ್ನ ಸ್ವಪ್ನದಲ್ಲಿ
ಬಂದು ನೀನು ಕಾಡುತಿರುವೆ
ಯಾರು ಎಂದು ತಿಳಿಯದಾಗಿ
ಇಳೆಯನೆಲ್ಲ ಹುಡುಕುತಿರುವೆ ||
ಶ್ವೇತ ಶುಭ್ರ ಉಡುಗೆ ತೊಟ್ಟು
ಮುಖದ ತುಂಬ ನಗೆಯ ಚೆಲ್ಲಿ
ಕವಿಯ ಮನಕೆ ಸ್ಫೂರ್ತಿಯಾದೆ
ರಸಿಕರೆದೆಯ ಬಡಿತವಾದೆ ||
ಬೇಲೂರ ಶಿಲ್ಪದಲಿಯ
ಚೆಲುವನೆಲ್ಲ ನೀನೆ ಕುಡಿದು
ತುಂಟ ನಗೆಯ ಸೂಸುತಿರುವೆ
ಮನವನೆಮ್ಮ ಸೆಳೆಯುತಿರುವೆ ||
ತಂಪು ಗಾಳಿ ನಿನ್ನ ಕೆಂಪು
ಕದಪು ಸೋಕಿ ಬೆಚ್ಚಗಾಗಿ
ನನ್ನ ವದನ ತಾಕಿದಾಗ
ಪುಳಕ ಗೊಂಡೆ ಹುಚ್ಚನಾಗಿ ||
ದುಂಬಿಯೊಂದು ನಿನ್ನ ತುಟಿಯ
ರಕ್ತ ಪುಷ್ಪವೆಂದುಕೊಂಡು
ಮಧುವ ಹೀರಲೆಂದು ಬರಲು
ರೋಷದಲ್ಲಿ ಅದನು ಹೊಡೆದೆ ||
ಒಂದು ಕೈಲಿ ಶುಕವ ಹಿಡಿದು
ಅದರ ಭಾಷೆ ಮಾತನಾಡಿ
ಬಿಂಕದಲ್ಲಿ ನಡೆಯುತಿರುವ
ನಿನ್ನ ನೋಡಿ ಬೆರಗು ಆದೆ ||
ದರ್ಪಣದಲ್ಲಿ ನಿನ್ನ ವದನ
ನೋಡಿಕೊಂಡು ಹಣೆಯ ತಿಲಕ
ಸರಿಯ ಮಾಡಿ ಕೊಳ್ಳುತ್ತಿರುವ
ಪರಿಯ ನೋಡಿ ಮೂಕನಾದೆ ||
ಒಂದು ಕೈಲಿ ಕುಂಚ ಹಿಡಿದು
ಚಿತ್ರವನ್ನು ಬರೆಯುತ್ತಿರುವೆ
ಏನದೆಂದು ನಾನು ನೋಡೆ
ನನ್ನ ಕಂಡು ಹರುಷಗೊಂಡೆ ||
ಬಾಲ ರವಿಯು ಮೂಡಿ ಬರಲು
ಮಂಜು ಮಾಯವಾಗಿ ಹೋಗಿ
ನಿನ್ನ ತನುವು ಚಿತ್ರ ವಾಯ್ತು
ನನ್ನ ಮನದ ಪಟದಲಿಂದು ||
ಬಿಸಿಲ ಝಳವು ಏರುತಿರಲು
ನೊಸಲ ಬೆವರು ಮುತ್ತದಾಗಿ
ತನುವ ನಗವು ಭಾರವಾಗಿ
ತಂಪು ನೆರಳ ಹುಡುಕುತಿರುವೆ ||
ಸಂಜೆ ಗೆಂಪು ಮೂಡಿ ಬರಲು
ಇಳಿವ ರವಿಯ ಕಿರಣ ನಿನ್ನ
ಮೈಯ ರಂಗು ಮಾಡಿ ಚಿನ್ನ
ಮನವದಾಗಿ ಬೆರಗು ನನ್ನ ||
ಎಷ್ಟು ದಿನವು ಸ್ವಪ್ನದಲ್ಲಿ
ಅಂಕೆಯೊಂದು ಇಲ್ಲದಾಗಿ
ಹೊತ್ತು ಗೊತ್ತು ನೊಡದಾಗಿ
ಬರುತಲಿರುವೆ ನನ್ನ ಕಾಡಿ ||
ಬಹಳ ವರುಷ ಕಳೆಯಲಾಗಿ
ಒಂದು ನಸುಕು ಎಚ್ಚರಾಗಿ
ತಿರುಗಿ ನೋಡೆ ನೀನೆ ಕಂಡೆ
ಅದುವೆ ನನ್ನ ಚಿನ್ನ ನನ್ನ ರನ್ನ !!
- ಜೈಮಿನಿ
04 Oct 2019, 06:47 am
ನಿನ್ನೆಗಳ ಸಮಾಧಿ ಮೇಲೆ
ಚಿಗುರೊಡೆದ ಗಗನ ಚುಂಬಿಗಳೊಳಗೆ
ಚೀರಾಟಗಳ ದೀನ ರಾಗ
ಮರೆವು ವರವೆಣಿಸಿ, ಕುಣಿದಾಡುತ್ತಲೇ
ಮರೆಯಾಗುವ ಮೌನ ರಾಗ !
ನೆರೆಯ ನೋವಿಗೆ ರಾಗವಿಲ್ಲ
ಮರಣ ವ್ಯಾಪಾರಿಗಳಿಗೂ ಬರವಿಲ್ಲ
ತಿರುಗು ಚಕ್ರದ ಮುಂದಿನ ಗುರಿ
ನಾನೇ ಎನ್ನುವ ಅರಿವಂತೂ ಇಲ್ಲವೇ ಇಲ್ಲ.
ಮರಣ ಭೀಕರ ಎಣಿಸುವುದಿಲ್ಲ
ಕೈಗಳಿಲ್ಲದ ಕಂದನಿಗೆ ಕಾಲುಗಳೂ ಇಲ್ಲ
ರುಂಡ ಬೇರ್ಪಟ್ಟ ಮೇಲೆ ಏನಿದ್ದರೇನು ?
ನರಳಿ ಒದ್ದಾಡುತ್ತಿದೆ ಬಾಲ್ಯಗಳು.
ಯುದ್ಧಪ್ರಭುಗಳ ಕಾರುಬಾರುಗಳಿಗೆ
'ಶಾಂತಿ ಪ್ರೀಯರ'ರ ಒತ್ತಾಸೆಗಳು
ಬೆದರು ಬೊಂಬೆಯಾದ ರಾಜನಿಗೆ
'ಅಯ್ಯೂಬೀ' ಬಗ್ಗೆ ಅರಿವೇ ಇಲ್ಲ.
(ಅಯ್ಯೂಬಿ= ಹಿಂದೆ ಅರೇಬಿಯಾವನ್ನು ಆಳಿದ ಮಹಾನ್ ರಾಜ)
- basheer
03 Oct 2019, 11:32 am
ಪ್ರಾಣ ಹೇಗೆ ಭ್ರೂಣ ಸೇರಿ
ಆತ್ಮ ಹೋಗಿ ಬಸಿರ ಕೂಡಿ ತನುವ
ಧರೆಗೆ ತಂದ ರೀತಿ ಕಂಡಿತೆನಗೆ ಒಗಟಲಿ
ಹಡೆದ ತಾಯಿ ತಂದೆ ನನ್ನ
ಬಿಟ್ಟರೇಕೆ ನಡುವಲೆಂಬ
ಪ್ರಶ್ನೆ ನನ್ನ ಮನದಲಿಂದು ಒಗಟಲಿ
ಬೆಳೆದೆ ಪರರ ನೆರಳಲಿ
ಪೋರೆದರೇಕೆ ಪ್ರೀತಿಯದುವೆ
ತಿಳಿಯದಾಯ್ತು ಒಗಟಲಿ
ಕನ್ನಡವೆಮ್ಮ ಬಲುವೆ ಸುಲಭ
ಸಮಾಜ, ವಿಜ್ಞಾನ ಸ್ವಲ್ಪ ಕಷ್ಟ
ಗಣಿತ ಮಾತ್ರ ಬಿಡಿಸಬರದು ಒಗಟಲಿ
ಮುನಿಸಿನಿಂದ ದೂರವಾದ
ಪ್ರಾಣಸಖಿಯ ಮನಸನಿಂದು
ಅರಿಯದಾದೆನಿಂದಿಗೂ ಒಗಟಲಿ
ಕೆಲಸವಿರದ ನನ್ನ ಕೈಯ
ಹಿಡಿಯಲೊಪ್ಪಿದ ಮಡದಿ
ಮನವ ಕಂಡೆ ನಾನು ಒಗಟಲಿ
ತಪ್ಪುಮಾಡಿ ಎರವು ಆದ
ಕೆಲಸದಿಂದ ತೆಗೆದು ಬಿಡದ
ಒಡೆಯ ಕಂಡ ನನಗೆ ಇಂದು ಒಗಟಲಿ
ಓದಿ ಏನ ಮಾಡಲೆಂದು
ಸಮಾಜಸೇವೆ ಮಾಡ ಹೊರಟ
ಮಗನು ಕಂಡ ಒಗಟಲಿ
ಸಿರಿಯುವಂತ ಸ್ಫುರದ್ರೂಪಿ
ವಿದ್ಯೆಯಿರುವ ವರನ ಒಲ್ಲೆನೆಂದ ನನ್ನ
ಮಗಳ ಮನಸು ಕಂಡಿತೆನಗೆ ಒಗಟಲಿ
ಪೌತ್ರರಾಡುತಿರುವ ಆಟ
ಪಿಜ್ಜಾ ಬರ್ಗರ್ ಪಾಸ್ತದೂಟ
ಎನು ಎಂದು ತಿಳಿಯದಾಯ್ತು ಒಗಟಲಿ
ಹತ್ತು ದೇಶ ಭಾಷೆ ನೋಡಿ
ನೂರು ವೇಷ ರೀತಿ ಮೋಡಿ
ಒಂದೆ ಮನುಜಕುಲಕೆ ಏಕೆ ಎಂಬ ಪ್ರಶ್ನೆ ಒಗಟಲಿ
ಬದುಕೆ ಎಲ್ಲ ಅಯೋಮಯವು
ವಿಶ್ವವೇಕೆ ಇರುವುದೆಂದು
ಹುಟ್ಟುಸಾವು ಏಕಿದೆಂಬ ಪರಿಯ
ತಿಳಿಯದಾದೆನಿಂದು ಒಗಟಲಿ!!!
- ಜೈಮಿನಿ
02 Oct 2019, 06:58 am
ಮೌನಿ ಆಗಲಾರ
ಎಂದಿಗೂ ಕವಿ
ಬರಹಗಳಲ್ಲಿ ಸದಾ
ಹಿಂಡುತ್ತಿರುವನು ಕಿವಿ
- basheer
01 Oct 2019, 06:02 pm
ಮರೆಯದಿರು ನನ್ನಾ
ನಿನ್ನ ತನವ ನೀ ತಿಳಿಯದೆ.
ಕಳೆದೋಗುವ ಕತ್ತಲೆಯ - ಭಯ
ವಿಧ ವಿಧದ ಬಣ್ಣದ
ಮಿರುಗುವ ಬೆಳಕಿನಲಿ
ಅವಿತು ಕುಳಿತಿರುವೆ
ಕಂಗಳಲ್ಲಿ ನೆಮ್ಮದಿಯ ಕಾಣದೆ
ಮರೆಯದಿರು ನನ್ನಾ - ಎಣ್ಣೆದೀಪ.
ಬೇಸಿಗೆ ಬಾಯಾರಿಕೆಯ - ಭಯ
ಅಕ್ವಾ ಅಲ್ಟ್ರಾ ತಂದಿರುವೆ
ಫ್ರಿಜ್ ನಲ್ಲಿ ಪೆಪ್ಸಿ ಜೋಡಿಸಿರುವೆ
ನಿನ್ನ ನೆಲವ ನೀನು ನೋಡದೆ
ಮರೆಯದಿರು ನನ್ನಾ - ಮಣ್ಣಿನ ಮಡಿಕೆ.
ಮಕ್ಕಳ ಮನರಂಜನೆ - ಭಯ
ಪಬ್ ಜಿ, ಕ್ಯಾಂಡಿಕ್ರಶ್, ಟೆಂಪಲ್ ರನ್
ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿರುವೆ
ಮೊಗ್ಗಿನ ಮನಸ್ಸನ್ನು ಅರಿಯದೆ
ಮರೆಯದಿರು ನನ್ನಾ - ಮರಕೋತಿ ಆಟ ಕುಂಟೆಬಿಲ್ಲೆ ಆಟ.
ಮನ ಮನೆಯ ಶೃಂಗಾರ
ಅಂತಸ್ತು ಆರೋಗ್ಯದ - ಭಯ
ಗಟ್ಟಿ ಕಿಟಕಿ ಬಾಗಿಲು
ವೇಗದ ಕಾರು ಸ್ಕೂಟರ್
ಎ. ಸಿ. ಒಳಗಡೆ ಇಟ್ಟಿರುವೆ
ತಾಪದ ಏರಿಕೆಯ ಲೆಕ್ಕಿಸದೆ
ಮರೆಯದಿರು ನನ್ನಾ - ಗಿಡಮರ ಸೈಕಲ್.
ನಮ್ಮ ಕನ್ನಡ
ಬೆಳಸಿ ಉಳಿಸಿಕೊಳ್ಳುವ - ಭಯ
ಹೆಸರುಗಳು ಬದಲಾವಣೆ
ಬೇಡ ಇಂಗ್ಲೀಷ್ ಹೋರಾಟ
ಮಾರ್ಗ ಗ್ರಂಥಗಳ ಜೋಡಿಸಿರುವೆ
ತತ್ವ ಪದಗಳ ನೀನು ಅನುಭವಿಸದೆ.
ಮರೆಯದಿರು ನನ್ನಾ - ಮೌಖಿಕ ರೂಪ.
- ಪ್ರವೀಣಾಸಿಂಗೋನಹಳ್ಳಿ
- praveens singonahalli
01 Oct 2019, 12:35 pm
ಮಣ್ಣಾಗಿ ಹರಿದ ಅಂಗಿಲಂಗ ತೊಟ್ಟು
ಅಳ್ಳೆಣ್ಣೆ ಹಾಕಿದ ತಲೆಬಾಚಿ
ಠಣ್ ಠಣ್ ಬೆಲ್ ಗೆ ಒಳಗೆ ಕೂಡಿಸಿ
ಅ ಆ ಇ ಈ ಕಲಿಸಿ ಮತ್ತೆ ಅದೇ
ಠಣ್ ಠಣ್ ಬೆಲ್ ಗೆ ಹೊರಗೆ ಹೋಡಿಸಿದ
ನಮ್ಮೂರ ಸರ್ಕಾರಿ ಶಾಲೆ ಅವಳು...
ಮುಂಜಾನೆ ಮನೆಯ ಮುಂದೆ ಸಾರಿಸಿದ ಹಸುರಿನ ಸಗಣಿ ಬಗುಡದಮೇಲೆ ಇಟ್ಟ
ಬಿಳಿ ಚುಕ್ಕಿರಂಗೋಲಿ ಅವಳು....
ಬಹುದೂರ ಸಾಗಿ ಗಿಡಗಂಟೆ ಪೊದೆ ಹೊಕ್ಕಿ
ಬಗೆ ಬಗೆಯ ಹೂಗಳ ಮುತ್ತಿಕ್ಕಿ
ಜೇನುಳ ಕೂಡಿಟ್ಟ ಜೇನುತುಪ್ಪ ಅವಳು...
ಬದುಗಳಲ್ಲಿ ಹುಲುಸಾಗಿ ಬೆಳೆದ
ನಾನಾತರಹದ ಹಸಿರು ಹುಲ್ಲನ್ನು ಮೇಯ್ದು
ಸಂಜೆ ಹೊತ್ತಿಗೆ ಆಕಳಿಗೆ ಹಾಲುಣಿಸಲು ಆತೊರೆಯುವ ಹಸು ಅವಳು.....
ದನಕರುಗಳ ತುಳಿತದ ಹೆಜ್ಜೆಯ
ಗುರುತಿನ ನೆಲದ ಮೇಲೆ
ಬಡಿದು ಸುರಿದು ತೂರಿದ ಕಣದರಾಶಿ ಅವಳು...
ಧಾನ್ಯ ಕುಟ್ಟಿದ, ಶಾಸ್ತ್ರ ಮಾಡಿದ
ಉಳುಕು ತೆಗೆದ, ವೀರವನಿತೆ
ಓಬವ್ವ ಹಿಡಿದ ಒನಕೆ ಅವಳು...
ಕೋಳಿ ಕೂಗೋ ಹೊತ್ತಿಗೆದ್ದು
ಬೀಸೋಕಲ್ಲಿನ ಪದ ಹಾಡಿ
ಬೀಸಿದ ರಾಗಿ ಹಿಟ್ಟಿನಿಂದ
ತಟ್ಟಿದ ರಾಗಿರೊಟ್ಟಿ ಅವಳು...
ನಿಂಬೆ ಹಣ್ಣು ಹಿಂಡಿ ನೀರಿಗೆ
ಸಕ್ಕರೆ ಬೆರೆಸಿ ಏಲಕ್ಕಿ
ಮೆಣಸು ಕುಟ್ಟಿ ಹಾಕಿ ಕಲಸಿಟ್ಟ
ಶರಬತ್ತು ಅವಳು....
ಮುಂಗಾರಿನ ಮಳೆ ಬಿದ್ದು
ಕ್ಷಣದಲಿ ಭೂಮಿ ತಣಿಸಿ
ಹೊರಸೂಸುವ ಮಣ್ಣಿನ
ನೆಲಗಂಧ ಅವಳು.....
ಕುಂಟೆಬಿಲ್ಲೆ ಗಿಲ್ಲಿದಾಂಡು ಆಟ ಆಡುವ
ಇಬ್ಬನಿ ಹಾರದ ಹೊರೆ ಹುಲ್ಲು, ಜೋಳವ
ಹೊತ್ತು ಹುಟ್ಟೋ ಹೊತ್ತಿಗೆ ಹೊತ್ತು ತರುವ
ಸಲೀಸಾಗಿ ಮರ ಏರುವ
ಸಗಾಟಾಗಿ ಸೈಕಲ್ ತುಳಿವ
ಬರಿಗಾಲಿನ ಗಂಡುಬೀರಿ ಅವಳು...
ಕುರಿಮಂದೆ ಹೊಡ್ಕೊಂಡು
ತುಂಡುಲಂಗ ತೊಡ್ಕೊಂಡು
ತಿಟ್ಟು ಗುಡ್ಡ ಬಳ್ಸಿಕೊಂಡು
ಹೊತ್ತು ಮುಳ್ಗೋವತ್ತಿಗೆ ಕೊಪ್ಲುಗೆ
ಕುರಿಗಳ ಕೂಡೋ ಕಪ್ಪು ಹುಡುಗಿ ಅವಳು..........
-ಪ್ರವೀಣಾಸಿಂಗೋನಹಳ್ಳಿ.
- praveens singonahalli
01 Oct 2019, 12:04 pm
ನಮ್ಮ ಬಗ್ಗೆ ನಮಗೆ ನಂಬಿಕೆ
ಇದ್ದರೆ ಸಾಕು
ಅವರವರ ಅಭಿಪ್ರಾಯ ಅವರವರಿಗೆ,,,
- Abhi Abhishek
01 Oct 2019, 09:33 am
ಅವನು ನಾನಲ್ಲ
ನಾನು ಅವನೂ ಅಲ್ಲ
ದೂರದಿಂದಲೇ ದಿಕ್ಕು
ಬದಲಿಸುವವರು ನಾವು
ಪರಸ್ಪರ ಅಪರಿಚಿತರು.
ಅವನು ಉತ್ತರವಾದರೆ
ನಾನು ದಕ್ಷಿಣ
ಹತ್ತಿರದಿಂದಲೇ ಹಾದು
ಸಂಧಿಸಿದರೂ ನಾವು
ಪರಸ್ಪರ ಅಪರಿಚಿತರು.
ಅವನಿಗೆ ತಿಲಕವಿಲ್ಲ
ನನಗೆ ಟೋಪಿಯೂ ಇಲ್ಲ
ಹುಟ್ಟಿನ ಮೂಲ ಒಂದೇ
ಆದರೂ ನಾವು
ಪರಸ್ಪರ ಅಪರಿಚಿತರು.
ಹುಟ್ಟಿನೆಡೆಗೆ ಪಯಣ
ಮಧ್ಯೆ ನಿಮಿಷಗಳ ಅಯನ
ಇಂದಲ್ಲವೆಂದರೆ ನಾಳೆ
ಒಂದಾಗಲಿರುವೆವು ನಾವು
ಪರಸ್ಪರ ಚಿರಪರಿಚಿತರು
- basheer
30 Sep 2019, 04:23 pm
ಯಾರೊ ಹುಟ್ಟಿ
ಯಾರೊ ಸತ್ತು ಹೊರಟರು
ಯಾರೊ ಮರೆತು
ಯಾರೊ ಕಲಿತು ಗೆದ್ದರು
ಬದುಕು ಹೀಗೆ ದೊಡ್ಡ ನಾಟಕ
ಕಲಿತ ಪಾಠ ನಿನ್ನ ಜಾತಕ.
- Vivan RadhaKrishna
30 Sep 2019, 12:28 am
ಧರೆಯು ಸುಡುತಿದೆ
ಜ್ವರವು ಹೆಚ್ಚಿದೆ
ವರುಷ ವರುಷದಿಂದೀಚೆಗೆ
ವಿಷವ ಕಾರಲು
ನಭಕೆ ಮನುಜನು
ನದಿಯು ಸಾಗರದೊಡಲಿಗೆ
ಪ್ರಾಣಿ ಪಕ್ಷಿಯ
ಸಂಕುಲವಳಿದಿದೆ
ಕಾಡ ಕಡಿಯುವ ಕೃತ್ಯಕೆ
ರವಿಯ ತೀಕ್ಷ್ಣದ
ಕಿರಣ ತಡೆಯಲು
ಬಾನ ಪದರವು ಸೋತಿದೆ
ಭುವಿಯ ಧ್ರುವದೀ
ಮಂಜು ಕರಗಿದೆ
ಶಾಂತ ಸಾಗರ ಉಕ್ಕಿದೆ
ನರೆಯು ಬಂದಿದೆ
ನಾಡು ಕೊಚ್ಚಿದೆ
ಧರೆಯ ಸೆರಗದು ಜಾರಿದೆ
ವರುಣ ಕೃಪೆಯದು
ಕಡಿಮೆಯಾಗಿದೆ
ಜಲದ ಕ್ಷಾಮವು ಹೆಚ್ಚಿದೆ
ಜಲದ ಜಗಳವು
ರಾಜ್ಯ ದೇಶದ
ನಿತ್ಯ ರಗಳೆಯು ಆಗಿದೆ
ಹಸಿರು ಧರೆಯನು
ನನ್ನ ಮಗಳಿಗೆ
ಮಾಘ ಮಾಸದಿ ತೋರಿದೆ
ನೋಡಬಹುದೇ
ಬೆಂಕಿ ಯುಂಡೆಯನೆಲ್ಲ
ಮಾಸದಿ ನಮ್ಮ ಮುಂದಿನ ಪೀಳಿಗೆ?
ಧರೆಯ ನುಳಿಸುವ
ಪುಣ್ಯ ಕಾರ್ಯದಿ
ಅಳಿಲ ಸೇವೆಯು ಬೇಕಿದೆ!
- ಜೈಮಿನಿ
29 Sep 2019, 03:13 pm