Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ತಿಂಗಳ ಬೆಳಕನ್ನು
ಅಂಗೈಯ ಬೊಗಸೆಯಲಿ
ಹಿಡಿಯಲು ಕಾದು ಕುಳಿತೆ!!
ಕಾಡುತಿಹ ಕನಸೊಂದು
ಅಸ್ಪಷ್ಟ ನೆನಪಿನಲಿ
ಬದುಕಿದೋ ಕುರುಡು ಸಂತೆ!!
ನಿದಿರೆಯಲಿ ಕಂಡಿರುವ
ಕನಸಿನ ಬೆನ್ನು ಹತ್ತಿ
ಓಡಿರಲು ಬರಿಯ ಚಿಂತೆ!!
ಇರುಳ ಕನಸನು ಮರೆತು
ಇರುವ ಬದುಕನು ಅರಿಯೆ
ನಿಜಸುಖವು ದೊರೆತಂತೆ!!
ಒಲೆಯ ಮೇಲೆ ಉಕ್ಕಿ
ಕೊತಕೊತನೆ ಕುದಿಯುತಿಹ
ಬಿಸಿ ಗಂಜಿ ಹಳಸಿದಂತೆ!!
ಮುಗಿಯುವ ಕಾಲದಲಿ
ನಗುವುದ ಮರೆತರೆ
ಮರಳದು ಕಾಲ ಮತ್ತೆ!!
- ಪಿ.ಜಿ.ಜ್ಯೋತಿ
26 Sep 2019, 11:31 am
ಎಂಗಿತ್ತೂ ನನ್ನೂರು
ಎಂಗಾಯ್ತೂ ಈಗ್ನೋಡು
ಗುರ್ತೇನೆ ಸಿಕ್ಕಾಕೆ ಇಲ್ಲಾ....
ಸ್ವರುಗ್ದಂಗೆ ಇದ್ದಿದ್ನ
ನರ್ಕಾನೆ ಮಾಡ್ಬುಟ್ರು
ಮನ್ಸನ್ಗೆ ಕರ್ಣೆನೆ ಇಲ್ವಾ.....
ಬೂಮ್ತಾಯಿ ಹಸ್ರೆಲ್ಲ
ಬರ್ಡಾಗಿ ಓಗ್ಬುಡ್ತು
ಪ್ರಾಣಿಗ್ಳೆ ಕಾಣ್ಸಾಕೇ ಇಲ್ಲಾ.....
ಎಲ್ನೊಡ್ರೂ ಬಿಲ್ಡಿಂಗು
ರೋಡೆಲ್ಲಾ ಟ್ರಾಫಿಕ್ಕು
ಎಲ್ಲೋಗ್ಲಿ ಗೊತ್ತಾಗ್ತಾ ಇಲ್ಲಾ....
ನಾನಾಡ್ತಿದ್ ಜಾರ್ಬಂಡೆ
ನೀನ್ ಹತ್ತಿದ್ ಕಲ್ಲಾನೆ
ಎಲ್ಲೋದ್ವು ಕಾಣ್ತಾನೇ ಇಲ್ಲಾ.....
ಕೆರೆ ದಂಡೆಲ್ ಕೂತ್ಕಂಡು
ಮಿಂಚುಳ್ಳಿಗ್ ಕಲ್ಲೊಡ್ ದು
ನೀರಾಡ್ತಿದ್ ಇಲ್ಲೇನೆ ಅಲ್ವಾ...,
ನಮ್ಕೇರೆ ಕಾಣ್ತಿಲ್ಲ
ಬೆಳ್ಳಕ್ಕಿ ಇನ್ನಿಲ್ಲ
ಕಸ್ಸಾನೇ ತುಂಬ್ಸವ್ರೆ ಎಲ್ಲಾ....
ಅದೇನೂ ಬುಡು ಅಂತ
ಆವಾಗ್ಲೇ ಅನ್ ಕಂಡೆ
ಔರ್ಮನ್ಸಾಗ್ ಕಸ್ ತುಂಬೈತಲ್ವಾ!!
ಇಲ್ಲಿತ್ತೂ ದೇವುಸ್ಥಾನ
ದಿನಾಗ್ಲೂ ಸ್ಕೂಲ್ಗೊಯ್ತ
ನಂಸ್ಕಾರ ಮಾಡ್ತಿದ್ವಿ ಅಲ್ವಾ.....
ದೇವ್ಸ್ಥಾನ ಕೆಡ್ವಾಕಿ
ದೊಡ್ಮಾಲು ಕಟ್ಟವ್ರೆ
ಇವ್ರಿಗೆ ಬುದ್ದೀನೆ ಇಲ್ವಾ....
ಶಾನ್ಬೋಗ್ರ ಮನ್ತಾವ
ಕೆಂಪ್ಡಬ್ಬಿ ಒಂದಿತ್ತು
ಪತ್ರಾಕಕ್ ಓಡ್ತಿದ್ವಿ ಅಲ್ವಾ....
ಆ ಜಾಗ್ದಾಗೀಗಲ್ಲಿ
ಕಸದ್ ಡಬ್ಬಿ ಇಟ್ಟವ್ರೆ
ಕಣ್ಣಾಗೆ ನೀರ್ ಬರಕ್ಕಿಲ್ವಾ.....
ತಿಂಗಳಾಗೆ ಒನ್ದಿವ್ಸ
ಡಬ್ಬಿನಾ ಹೆಗಿಲ್ಗಾಕ್ಕಂಡ್
ಉಸ್ಸೇನಿ ಬರ್ತಿದ್ದ ಗೊತ್ತಾ......
ಐದ್ ಪೈಸಾ ಕೊಟ್ಬಿಟ್ಟು
ಗೊಂಬ್ಯಾಟ ನೊಡ್ಬುಟ್ರೆ
ತಿಂಗ್ಳೆಲ್ಲಾ ಖುಶೀನೆ ಗೊತ್ತಾ.....
ಉಸ್ಸೇನೀ ಅಟ್ಟೀನ
ಉಡಿಕ್ಕಂಡೋಗಿದ್ದೆ
ಇರ್ಬೈದ್ದು ಮಸೀದ್ ತಾವಂತಾ..,
ಅಲ್ನೊಡಿದ್ರೇನೈ ತೆ
ಐನಾಕ್ಸು ಬಂದೈತೆ
ಐನೂರಕ್ಕೊಂದ್ ಟಿಕೆಟ್ಟಂತಾ.....
ಅಂಗೇನೆ ಮುಂದ್ಕೋದೆ
ಇಸ್ಕೂಲೀನ್ ತಾವ್ ಬಂದೆ
ಫ್ರೆಂಡ್ಸಾರಾ ಸಿಕ್ತಾರಾ ಅಂತಾ....
ಆಗ್ಲೇನೆ ಗೊತ್ತಾತು
ಇಸ್ಕೂಲ್ನ ಮಾರ್ ಬುಟ್ಟು
ಕಾಂಪ್ಲಕ್ಸ್ನಾ ಕಟ್ತವ್ರೇ ಅಂತಾ
ರಾಮಜ್ಜನ್ ನಾ ಕೇಳ್ದೆ
ನಾವತ್ತಿದ್ ಗುಡ್ದಾನೂ
ಗುಡ್ದಾಗಿದ್ ಚಿಕ್ಕೋಟೆ
ಕಣ್ಸಾಕೆ ಇಲ್ವಲ್ಲ ಅಂತಾ...
ರಾಮಜ್ಜಾ ಆತ್ಕಂಡ
ಗುಡ್ಡನಾ ಸಿಡ್ಸವ್ರೆ
ರೈಲ್ಪಟ್ರೀ ಆಕಾಕೇ ಅಂತಾ....
ಯಾರನಾ ಹಾಳಾಗ್ಲಿ
ಊರಚೇ ಬಂದಬುಟ್ಟೆ
ಹಣ್ಮಪ್ಪನ್ ನೋಡಾನ ಅಂತಾ....
ಒಟ್ಟೆಲ್ಲಾ ಸಂಕ್ಟಆತು
ಬುಲ್ಡೋಜರ್ ಕೆಳಗ್ ನೋಡಿ
ಹಣ್ಮಪ್ಪಂಗೀಗತಿ ಬಂತಾ?......
ಪ್ರಕೃತಿ ತಾಯ್ ಮ್ಯಾಗೆ
ಆತ್ಯಾಸೆಗ್ ಮನ್ಶಾನೂ
ಅನ್ಯಾಯ ಮಾಡ್ತವ್ನೆ ಅಲ್ವಾ....
ನಾನೂನೂ ಕಾಯ್ತೀವ್ನಿ
ಉಮ್ಮೀದೂ ಮಡಿಕ್ಕಂಡು
ಯಾವಾಗ ನಿಲ್ಸ್ತಾನೆ ಅಂತಾ
ದೇವ್ರೇನೆ ಬಂದ್ ಬುಟ್ಟು
ನನ್ಮುಂದೆ ನಿಂತ್ಕಂಡು
ಕೇಳಿದ್ರೆ ಏನ್ ಬೇಕು ಅಂತಾ....
ಕೇಳ್ತೀನಿ ಅವುನ್ನಾಗ
ನಮ್ಮೂರ್ನ ಮೊದುಲ್ನಂಗೆ
ಮಾಡಾಕೆ ಆಯ್ತೈತಾ ಅಂತಾ.....
ಮಾಡಕೆ ಆಯ್ತ್ತೈತಾ ಅಂತಾ....
- ಜೈಮಿನಿ
24 Sep 2019, 05:29 am
ಒಡೆದ ಹೃದಯ ಮುದುಡಿದ
ಹಾಳೆಯ ಹಾಗೆ,
ಎಷ್ಟೇ ಸರಿ ಮಾಡಿದರೂ
ಮೊದಲಿನ ಹಾಗೆ ಆಗುವುದಿಲ್ಲ.
ಹೃದಯದ ಮೇಲೆ ನೆನಪುಗಳ ಗೆರೆ ಉಳಿಯುವುದು ನಿಶ್ಚಿತ....
....✍ ರಾಮ್
- ರಾಮ್
23 Sep 2019, 09:44 pm
ಎನಿದೆ ನೀ ಇಲ್ಲದೆ
ಮನ ಮುಳ್ಳಿನ ಹಾಸಿಗೆ
ಇರಿದು ಕೊಲ್ಲುತ್ತಿದೆ
ಇರುಳಲ್ಲೂ ಬೇಸಿಗೆ
ಅತ್ತ ಕಣ್ಣು ಕೆಂಪಾಗಿದೆ
ಹೇಳಲಾಗದೆ ಕಾರಣ
ಹೇಳದೇ ಬಾಡಿಹೋಗಿದೆ
ನಮ್ಮ ಮನೆಯ ತೋರಣ
ಪಲ್ಲವಿ ಇಲ್ಲದ ಚರಣ
ಹಾಡದೆ ಅಲ್ಲೆ ಮಲಗಿದೆ
ಪ್ರೀತಿಯ ದನಿ ಕೇಳದೆ
ನನ್ನ ಹೃದಯ ಮರುಗಿದೆ
ಪ್ರೀತಿಯ ತೈಲವು ಸಿಗಲಿ
ದೀಪದಂತೆ ಉರಿಯುವೆ
ಬಾಡಿ ಹೋದ ಬಳ್ಳಿ ನಗಲಿ
ಸಾಕಷ್ಟು ನೀರ ಸುರಿಯುವೆ
ನೀನು ಇಲ್ಲದೇ ಇರುವ ನಾನು
ಆ ರತಿಯು ಇಲ್ಲದ ಮದನ
ನನ್ನ ಮನಸಿನ ನೋವ ಹಾಡನು
ನುಡಿಸಲೊಂದು ಸಾಧನ
✍✍✍ ಚಿನ್ನು
- Chinnu Chinna
23 Sep 2019, 01:27 pm
ಪ್ರಭಾತ ಕಿರಣಗಳು
ಒಣ ಶಿಖರಗಳ ಚಿತ್ರವ ಬಿಡಿಸಿದಾಗ
ಮರಳ ಹಲಗೆಯಲಿ ನಾ ಕಂಡೆ
ಮೊದಲ ಬಾರಿಗೆ ನಿನ್ನ ಪ್ರತಿರೂಪವ
ಬರಬರುತ್ತಾ ಅಗ್ನಿಯ ತಾಮ್ರ ವರ್ಣಗಳು
ಬೇರುಗಳ ಮೂಲಕ ಗರ್ಭಕ್ಕಿಳಿದು
ಬಾಯಾರಿಕೆ ನೀಗಿಸಿದಾಗ
ಕಂಡೆ ನಾ ಅಸಹಾಯಕತೆಯ ಬಿಂಬವ
ನಿನ್ನೆ ಮೊನ್ನೆಗಳ ಸಂಬಂಧಗಳು
ಒಂದಾನೊಂದು ಕಾಲದ
ಕಥೆಯಂತೆ ವ್ಯಥೆಯಾದಾಗ
ಚಿತ್ರವಾಗಿ ಕಾಡ ತೊಡಗಿತು ವಾಸ್ತವ
ಎಲ್ಲೋ ಕೇಳುತ್ತಿದ್ದ ಸದ್ದು ಗದ್ದಲಗಳು
ಹತ್ತಿರ ಹತ್ತಿರ ಕೇಳಿಸಿ
ಕೊನೆಗೆ ಕಿವಿಯ ಕಚ್ಚಿದಾಗ
ಕಂಡೆ ನಾ ನನ್ನದೇ ಪ್ರತಿಬಿಂಬವ
- basheer
21 Sep 2019, 09:10 am
ಮರುಳ ಮನಗಳ
ದುರುಳ ಆಶೆಗೆ
ಕರುಳ ಬಳ್ಳಿಯು ಉರುಳಿಗೆ
ಮರಣ ನೋವನು
ಒತ್ತಿ ಮನದೊಳು
ಅಬ್ಬೆ ಇತ್ತಳು ಒಪ್ಪಿಗೆ.
ಇರುಳ ಕಾಡಲಿ
ಬಿರಿವ ಹೂವಿಗೂ
ಬೆಳಕ ಕಾಣುವ ಹಂಬಲ
ಯಾರ ನೋವನು
ಯಾರು ಬಲ್ಲರು
ಚರಮ ಗೀತೆಗೂ ಚಂಚಲ.
ವಂಶ ಗೋಪುರ
ಕಟ್ಟಲಾಗದ
ಗತಿಯು ಬರಲಿದೆ ಸನ್ನಿಧಿ
ಹಲ್ಲ ಸೇರುವ
ಭ್ರೂಣ ಬರೆದಿದೆ
ಘೋರ ಕಾಲಕೆ ಮುನ್ನುಡಿ.
- basheer
21 Sep 2019, 09:05 am
ಪುಂಗಿ ಊದುವ
ಹಂಗು ಯಾತಕೆ
ಅಂಗಿ ಕಳಚುವ ದೇಹವೇ
ಜಂಬ ಕರಗಿಸಿ,
ಕೊಬ್ಬು ಜಾರಿಸಿ
ಮನವ ಎಬ್ಬಿಸು ಮೌಢ್ಯವೇ
ಕನಸು ಕಟ್ಟಲು
ನಿನ್ನದೇನಿದೆ
ಯಾರ ಮಣ್ಣಲಿ ಮತ್ಸರ
ಜಗವು ಬೆಳಗುತ,
ಮತ್ತೆ ಬಾಡುತ
ಮಾಯವಾಗುವ ಚಪ್ಪರ
ನಾನು ನನ್ನವ,
ಎಣಿಸಿ ಕೊಂಡವ
ಹಾದಿ ತಪ್ಪಿಸಿ ಬಿಟ್ಟನು
ಗುರಿಯ ತಲುಪದೆ
ಗುಣವ ತಿಳಿಯದೆ
ಕೊನೆಗೆ ತಾನೇ ಕೆಟ್ಟನು
ಹಣತೆ ಉರಿಯಲಿ
ಒರತೆ ಚಿಮ್ಮಲಿ
ಮತ್ತೆ ಚಿಗುರಲಿ ಹೊಮ್ಮತ
ನಿನ್ನೆಯಂತೆಯೆ
ನಾಳೆ ಎಂದರೆ
ಇಂದು ಯಾತಕೆ ಕಮ್ಮಟ
- basheer
20 Sep 2019, 05:47 pm
ನಿನ್ನೆ ಅವಳು
ಮೊಗ್ಗಾಗಿದ್ದವಳು,
ಕಾಣಲೇ ಇಲ್ಲ
ಇಲ್ಲಾರ ಕಣ್ಣಿಗಿವಳು.
ಇಂದು ಮುತೈದೆ
ಆಗ ಹೊರಟಳವಳು,
ಸೇರಲೇ ಇಲ್ಲವಿಲ್ಲಿ
ಯಾರ ಮನದಂಗಳಕ್ಕಿವಳು.
ಸಂಜೆ ಸಡಗರದಿ
ತುಸು ಸೆರಗಿಳಿಸಿ ರಸ್ತೆಗಿಳಿದಳು,
ಮುತ್ತಿದರೆಲ್ಲರಿಲ್ಲಿ
ಹವಳದ ಗೊಂಬೆಯಾದಳು.
ಹೊಟ್ಟೆ ಪಾಡಿನಿಂದಾಗಿ
ಪರಿಸ್ಥಿತಿಗೆ ಸಿಕ್ಕು ಕಲ್ಲಾದಳು,
ನಾಯಿ ಮುಟ್ಟಿದ ಮಡಿಕೆಯಾಗಿ
ಬರೀ ಮಸಣಕ್ಕೆ ಶೃಂಗಾರವಾದಳು.
ನಾಗರಾಜ ಬಿ
ಹಾವೇರಿ
- ನಾಗರಾಜ ಬಾಕೆ೯ರ್
20 Sep 2019, 08:00 am
ಮನೆಯಿಂದ ನಾ ಹೊರಟೆ ಸೈಕಲನ್ನೇರಿ
ಹುಡುಕುತಾ ಅವಳ ಮನೆಯ ದಾರಿ
ನನ್ನ ಹೃದಯದ ಸೈಕಲ್ಲಿಗೆ ಬ್ರೇಕು ಬಿತ್ತು
ಅವಳ ನಗುಮೊಗವ ಕಂಡು.
ಬಂದಳು ನನ್ನ ಮನದಂಗಳದ ಕಸವ ಗುಡಿಸಿ
ಹಳೆಯ ನೆನಪು ಮರೆಸಿ ಪ್ರೀತಿಯ ನೀರನ್ನು ಸಿಡಿಸಿ.
ಕಣ್ಣು ಹೊಡೆದ
ಸೂರ್ಯ ಕುಳಿತು ಅವಳ ಕಣ್ಣ ಹೊಳಪಲಿ
ತಡವಾದರೂ ಮನೆಗೆ ಹೋಗದ ಚಂದ್ರ
ನಗುತಿರುವನು ಅವಳ ದಂತಪಂಕ್ತಿಯಲಿ.
ಸುಳಿದಾಡಿದೆ ಅವಳ ಮನೆಯ ಸುತ್ತ ಬೆಲ್ಲನ್ನು ರಿಂಗಣಿಸಿ
ಹೊರಗೆ ಬರುವಳೇನೋ ಎಂಬ ನಿರೀಕ್ಷೆಯಲಿ.
ಅವಳ ಗೆಜ್ಜೆಯ ಸದ್ದು ನನ್ನ ಹೃದಯದ ಬೆಲ್ ರಿಂಗಣಿಸಿ
ಬಂದಳು ಚುಕ್ಕಿಯ ರಂಗೋಲಿ ಇಡಲು
ಒಂದೊಂದು ಹೆಜ್ಜೆಯನಿಕ್ಕುತಾ ನನ್ನ ಮನದಲಿ.
ಬಳಿ ಹೋಗಿ ನಿಂತೆ ಅವಳ ಮಾತನಾಡಿಸಲು
ಕಳೆದುಹೋಗಿದ್ದೆ ಅವಳ ಕಲ್ಪನೆಯ ಗುಂಗಿನಲಿ.
ರಪ್ಪನೇ ನೀರು ಹೊಡೆದಳು ಮುಖದ ಮೇಲೆ
ನಶೆಯೆಲ್ಲಾ ಇಳಿದು ಹೋಯಿತು ಕಣ್ಣಿಗೆ ಕಂಡದ್ದು ಕಂಡು
ಅರಿವಾಯಿತು ಅದು ಅವಳಲ್ಲ ಅವಳ ಅಜ್ಜಿ ಎಂದು.
- ಉಮೇಶ್ (ಮಣಿ).
- Umesh
19 Sep 2019, 08:09 pm
ಇಬ್ಬನಿ ಸುರಿದು ಹುಲ್ಲಿನ ಮೇಲೆ
ಪೋಣಿಸಿ ಮುತ್ತನು ಹಾಕಿದೆ ಮಾಲೆ!!
ಚುಮು ಚುಮು ಚಳಿ ಕೊರೆವ ವೇಳೆ
ಚಿಲಿಪಿಲಿ ಹಕ್ಕಿಗಳ ಕಲರವದ ಲೀಲೆ..!!
ಅಂಬರದಿ ತೇರ ರವಿ ಏರಿ ಬಂದು
ನಾಚಿ ನೀರಾಗಿ ಇಬ್ಬನಿ ಕರಗಿಹುದು!!
ಮಿರ ಮಿರ ಮಿಂಚಲು ರವಿಯ ಕಿರಣ
ಹುಲ್ಲಿಗೆ ತಾಗಿ ಹೊಮ್ಮಿದೆ ಹೊಂಗಿರಣ..!!
ಗಿರಿ ಪರ್ವತಗಳ ಸಾಲು ಸಹ್ಯಾದ್ರಿಯಲಿ
ನೀಲಾದ್ರಿಯ ಸೊಗಸು ಮುಸ್ಸಂಜೆಯಲಿ!!
ತಲೆದೂಗಿ ಮರಗಳು ಕಾದಿರಲು ಸಾಲಲ್ಲಿ
ವರುಣ ಬರುವನು ಮೇಘಗಳ ಮರೆಯಲ್ಲಿ..!!
ಬೀಸಿ ಬರಲು ತಣ್ಣನೆ ಗಾಳಿ ಸವಿಯಾಗಿ
ಒಮ್ಮೊಮೆ ಹಿತವಾಗಿ ಮತ್ತೊಮ್ಮೆ ಬಿರುಸಾಗಿ!!
ತೇಲಿ ಬರುತಿದೆ ಗಂಧರ್ವರ ಗಾನ ಸೊಗಸಾಗಿ
ಮೈ ಮರೆತು ನಿಂತೆ ಕೇಳುತ್ತಾ ಮೂಕನಾಗಿ..!!
ವನ್ಯಜೀವಿಗಳಿಗೆ ಆಸರೆಯು ಈ ವನ ರಾಣಿ
ನೋಡುಗರ ಮನ ತಣಿಸುವ ಸುಂದರ ಗಣಿ!!
ಬಾನತ್ತ ಮೈ ಚಾಚಿ ಮಲಗಿಹ ಪರ್ವತ ಶ್ರೇಣಿ
ಅದರಂದಕೆ ಸೋತು ಹೊಮ್ಮಿದೆ ಕಾವ್ಯವಾಣಿ..!!
- Tribhuvan
17 Sep 2019, 08:56 pm