ನಿನ್ನ ಇಂಚಿಂಚು ದೇಹವನು
ಜಾಲಾಡಿ ಹುಡುಕಿ ಹೊಸ ಪದಗಳ
ಬಸಿದು ಬರೆದೆನಂದು ನೂರಾರು
ಪ್ರಣಯ ಪ್ರೇಮ ಕವಿತೆ.
ನನ್ನ ಮನದಾಸೆ ದಾಹವನು
ತಾಳಲಾರದೆ ಕುಗ್ಗಿ ಕುಸಿದೆನು ಇಂದು
ಬರೆಯಲಾರದೆ ಕಿರು ಸಾಲೊಂದರಲ್ಲೇ ನಾ ಸೋತೆ.
ಹಳಸಲು ಪದಗಳಷ್ಟೇ ಉಳಿದಿವೆ
ಈ ಬಡ ಕವಿಯ ಹರಕು ಜೋಳಿಗೆಯಲ್ಲಿ,
ಹೊಸ ಪದಗಳ ಕಾಮನಬಿಲ್ಲು ಕರಗಿದೆ
ಸುಂದರಿಯ ಅನುಪಸ್ಥಿತಿಯಲ್ಲಿ.
ಗಂಟಲು ಕಟ್ಟಿದೆ ವಸಂತದಲ್ಲೂ ಕೋಗಿಲೆಗೆ,
ಗರಿ ಸುಟ್ಟಿದೆ ಆಡುತ್ತಿದ್ದ ಗಂಡು ನವಿಲಿಗೆ!
ಆರಂಭ ನವಯುಗದ ಶುಭಾರಂಭ
ವಸಂತನೆಂಬ ಋತು ದೈವ ಧರೆಗಿಳಿದ ಸಂದರ್ಭ..
ಅಬ್ಬಬ್ಬಾ ಎಂಥ ಜೀವಕಳೆ ಜಗದ ತುಂಬ
ಚೈತ್ರನೆಂಬ ಋತುರಾಜ ಧರೆಗೆ ಮುತ್ತಿಟ್ಟ ಸಂದರ್ಭ.
ಗಿಡ ಮರಗಳ ತುಂಬ
ಹಸಿರು ಬೆಳಕಿನ ಹಬ್ಬ..
ಮನೆ ಮನಗಳ ತುಂಬ
ಹೊಸ ವರ್ಷದ ಹಬ್ಬ.. " ಪ "
ಕೂಹೂ ಕೂಹೂ ಎಂದು ಕೋಗಿಲೆ
ಹಾಡುತ ನಲಿಯುತಿದೆ ಮಾಮರದ ಮೇಲೆ..
ಹೂವು ಹೂವಿನ ಒಲವಿನ ಕೆನ್ನೆಯ ಮೇಲೆ
ಪೋಣಿಸುತಿದೆ ದುಂಬಿ ಸಿಹಿಮುತ್ತಿನ ಸರಮಾಲೆ..
ಸಂತಸದಿಂದ ರವಿ ಕುಣಿದು ಬಂದ ಕೂಡಲೇ
ಹೊಂಬಣ್ಣದ ಚಿತ್ತಾರ ಬಾನಂಗಳದ ಮೇಲೆ..
ಬಿಸಿಕಿರಣ ಮೈಮನ ಸೋಕುವ ಜೊತೆಯಲ್ಲೇ
ತೇಲಿಬರುತಿದೆ ತಂಗಾಳಿಯ ಹಿತವಾದ ಅಲೆ..
ತೂಗುತಿದೆ ಮನೆಮನದ ಬಾಗಿಲ ಮೇಲೆ
ಬೇವುಮಾವಿನ ತೋರಣ ಎಂಬ ಉಲ್ಲಾಸದ ಉಯ್ಯಾಲೆ..
ಒಲವಿನ ರಂಗೋಲಿ, ನಲಿವಿನ ಓಕುಳಿಯ ಮೇಲೆ
ಬರೆದಿದೆ ತನುಮನ ಹೊಸ ಕನಸುಗಳ ಓಲೆ..
ಎಣ್ಣೆಯ ಮಜ್ಜನ ಸರಿಸಿತು ನೋವಿನ ಕೊಳೆ
ಹೋಳಿಗೆ ಹೂರಣ ಸುರಿಸಿತು ಪ್ರೀತಿಸ್ನೇಹದ ಮಳೆ.
ಕಿರುನಗೆಯಲಿ ಮಿನುಗುವ ಶಶಿಯ ದರ್ಶನ ಪಡೆದ ಮೇಲೆ
ಕಳಚಿ ದೂರವಾಯಿತು ಮನುಜನ ಪಾಪದ ಬಲೆ..
ಸೃಷ್ಟಿಯಲಿ ಅಡಗಿದೆ ಸಿಹಿಕಹಿಯ ಸೆಲೆ
ಬೇವುಬೆಲ್ಲ ಬೆರೆತರೇನೇ ಬದುಕಿಗೊಂದು ಬೆಲೆ..