ಒಂಟಿ ಒಣ ಎಲೆಯೊಂದು ಉದುರಿಹುದು
ಜನರಿಲ್ಲದಾ ಉದ್ಯಾನದ ಕಲ್ಲು ಬೆಂಚಿನ ಮೇಲೆ..
ಮಟಮಟ ಮದ್ಯಾಹ್ನ ಉರಿಬಿಸಿಲು ಸುಡುತಿಹುದು
ಕಲ್ಲು ಕಾದು ಬಿಸಿ ಹೆಂಚಾಗಿಹುದು..
ಆದರೂ ಉರಿಯಿಲ್ಲ ಎಲೆಗೆ
ಏಕೆಂದರೆ ಉಸಿರಿಲ್ಲ ಅದಕೆ..
ಮರದ ನಂಟು ಇರುವ ವರೆಗೂ
ಹಸಿರೆಲೆ ಎಂಬ ಸನ್ಮಾನ
ಹಕ್ಕಿ ಪಿಕ್ಕಿಗಳಿಗೆ ತಂಪೆರೆದು ಸಾಂತ್ವನ,
ಹೂ ಹಣ್ಣುಗಳ ಬಚ್ಚಿಟ್ಟು ಕಾಯ್ದು
ಅಭಿಮಾನ,
ಇದೇ ಕಲ್ಲು ಬೆಂಚಿನ ಮೇಲೆ ಕುಳಿತು
ಪ್ರೇಮ ಸಲ್ಲಾಪವಾಡಿದ ಜೋಡಿಗೆ
ನೆರಳಿತ್ತು ಸಲಹಿದ ಸಿಹಿ ಸಿಂಚನ.
ಪಟ್ಟನೆ ಬಿದ್ದು ಅಲುಗಿಸಿ ಎಳೆಯ
ಮಳೆ ಹನಿಗಳು ಎಂದೋ ಜಾರಿ
ಹೋದವು ಭೇಟಿಯಾದ ಅರೆಕ್ಷಣದ
ಎಲೆಯನು ಮರೆತು..
ಕೊಂಚವಷ್ಟೇ ನೆನೆಸಿ..
ಜವರಾಯನ ಆರ್ಭಟಕ್ಕೆ
ಹಸಿರು ಜರತಾರಿ ಸೀರೆಯುಟ್ಟ ಭೂತಾಯಿ ,
ಕುಸಿದು ಕುಳಿತಿಹಳು .
ಅಲ್ಲಲ್ಲಿ ಭೋರ್ಗರೆದು ಝರಿಯಾಗಿ ಹರಿಯುತಿದೆ
ಮಳೆ ಹನಿಯು ,
ಅದರ ನಡುವಿನಲಿ
ಪ್ರಕೃತಿಯು ಝಗಮಗಿಸುತಾ ತಂಪನ್ನೆರೆಯುತಿದೆ ಈ ಸುಂದರ ಕ್ಷಣಗಳಲ್ಲಿ.
ನನ್ನ ಕಷ್ಟ-ಕಾರ್ಪಣ್ಯಗಳು ಸವಿಯುತಿದೆ ,
ಪ್ರಕೃತಿಯ ಜೊತೆಗೂಡಿ.
ಮನಮೋಹಕ ದೃಶ್ಯಗಳ ಬಗ್ಗೆ ಮನದಲ್ಲಿ ಹಾಡಿ
ಸದಾ ಹಸಿರು
ಪ್ರಕೃತಿಯೇ ನನ್ನ ಉಸಿರು .
ಸುರಿವ ಮಳೆ ಹನಿ ಹೇಳಿದೆ ಕೂಗಿ
ಮಲಗು ಮಲಗು ಗೆಳತಿ ಹೊತ್ತಾಯಿತು ಎಂದು
ಕನಸಲ್ಲಿ ಕಾರ್ಮೋಡ ಕಾದಿಹುದು
ಸುಂದರ ಕತೆ ಹೇಳಿ ರಾತ್ರಿಯ ದಾಟಿಸಿ
ನಾಳೆಗೆ ನಿನ್ನ ತಲುಪಿಸಲೆಂದು..
ಆ ಚಂದ್ರಮ ಎಲ್ಲೋ ಮರೆಯಾಗಿರುವ ಗೆಳತಿ,
ಒಂದು ನಲ್ನುಡಿಯ ಹೇಳುವುದನು ಮರೆತು..
ಬಾನಲ್ಲಿ ನಡೆದಿದೆ ಮೋಡಗಳ ಕಳ್ಳಾಟ
ನಿನ್ನ ತಂಪಲ್ಲಿ ತೇಲಿಸಲು ಏಕೋ ನೂಕಾಟ..
ನಿದ್ರಾ ದೇವಿ ಕಾದಿಹಳು ನಿನ್ನ ಆವರಿಸಿ,
ನೇವರಿಸಿ ತನ್ನ ತೆಕ್ಕೆಯಲ್ಲಿ ಸಂತೈಸಲು..
ದಣಿದ ನಿನ್ನ ಕಂಗಳಿಗೆ ಬರಲಿ ಸುಖ ನಿದ್ರೆ
ಸಾಲುಗಟ್ಟಿ ನಿಂತ ಕಪ್ಪು ಬಿಳುಪು ಕನಸುಗಳಿಗೆ
ಬಣ್ಣ ಬಳಿವ ಕೆಲಸ ರಾತ್ರಿ ಪುರಾ ನನಗಿರಲಿ,
ಒಂದೊಮ್ಮೆ ಎಚ್ಛೆತ್ತರೆ ನೀನು ಹೊಂಗನಸ
ಹೊದಿಕೆ ಸರಿಪಡಿಸಲೇನು..