ಹೌದು
ನೀನು ಇದ್ದಿದ್ದೇ ಆಗಿದ್ದರೆ
ನಾನು ಹೀಗಾಗುತ್ತಿರಲಿಲ್ಲ
ನಿನ್ನ ಇರುವಿಕೆ ಅನುಮಾನಗೊಂಡದ್ದು
ನಾನು ನನ್ನಂತೆ ಜೀವಿಸಲಾರದ್ದಕ್ಕೆ
ಬಾಳು ಶುಷ್ಕವೆನಿಸಿ
ಸಾವಿನ ಮನೆ
ಕದ ಮುರಿಯಲೆತ್ನಿಸಿದ್ದು
ನಿನ್ನಲ್ಲಿಯ ನಂಬುಗೆ
ಮರಗಟ್ಟಿದಕ್ಕೆ
ಕಳ್ಳ ಸುಳ್ಳರ ಮನೆ
ಕದ ಕಾಯುವ ನೀನು
ದೀನರೆಡೆ ಕಿಂಚಿತ್
ಕರುಣೆ ಹರಿಸಬೇಕಿತ್ತು
ಇದಕ್ಕೆಲ್ಲ ನಿನ್ನ ಸಮಜಾಯಿಷಿ
ಕರ್ಮ ಸಿದ್ದಾಂತ
ಒಪ್ಪುವುದಿಲ್ಲ ಬಿಡು
ಹಸಿದು ಕಂಗೆಟ್ಟಾಗ
ಮೀರಲೇ ಬೇಕಾಗುತ್ತದೆ
ಆದರ್ಶದ ಕಟ್ಟೆ
ಓ ಮಮಕಾರದ ಅಕ್ಷಯ ನಿಧಿಯೇ
ನಿನಗೆ ಕೋಟಿ ವಂದನೆ...
ಓ ಸ್ನೇಹದ ಮೂರ್ತ ರೂಪವೇ
ನಿನಗೆ ಕೋಟಿ ವಂದನೆ...
ನಡು ರಾತ್ರಿಯಲಿ ನನ್ನ ಆಳುವಿಗೆ
ಎದೆ ಹಾಲಿನ ಸ್ವಾಂತನ ನೀಡಿ...
ನನ್ನ ಹಟಕ್ಕೇಲ್ಲ ತಲೆಬಾಗಿ ನಿಂತು...
ಅತ್ತಾಗ ಕಣ್ಣೊರಿಸಿ, ನಕ್ಕಾಗ ಕಣ್ಣರಳಿಸಿ...
ಪ್ರೀತಿಯ ಮಳೆ ಸುರಿಸಿ,ಗೆಲುವಿನ ದಾರಿ ತೋರಿಸಿ
ಬೆಳೆಸಿದಳು ನನ್ನ ತಾಯಿ.
ಓ ಜನನೀ... ನಿನಗೆ ಕೋಟಿ ವಂದನೆ...!
ತೆವಲಿ ಬರಲಿ ಕೈ ನೀಡಿದಳು...
ತೊದಲು ನುಡಿಯಲು ತಿದ್ದಿ ಹೇಳಿದಳು...
ಚಂದ ಮಾಮನ ತೋರಿಸಿ ತುತ್ತು ಕೊಟ್ಟು
ಹಸಿವು ನೀಗಿಸಿದಳು...
ತನ್ನ ಬಸಿರೊಳಗೂ ನನಗೆ ಉಸಿರಾದಳು...
ಓ ದಿವ್ಯ ಚೇತನವೇ... ನಿನಗೆ ಕೋಟಿ ವಂದನೆ...!
ಪದಗಳು ಸಾಕಾಗದು ನಿನ್ನ ಬಣ್ಣಿಸಲು...
ಈ ಜನ್ಮವು ಸಾಕಾಗದು ನಿನ್ನ ಋಣವ ತೀರಿಸಲು.
ಅಮ್ಮಾ... ನಿನಗೆ ಕೋಟಿ ಕೋಟಿ ವಂದನೆ.
ಗೋಸುಂಬೆಯ ತೆವಳು ನಿಂತಿಲ್ಲ
ಅದರ ಹೆಸರ ಕೊನೆಗೆ ಕ್ಷಣ ಕ್ಷಣಕ್ಕೂ ಕಣ ಕಣವು
ತನ್ನಲ್ಲೇ ತಾನು ಬದಲಿಸಿ ಹೆಜ್ಜೆ ಇಟ್ಟ ಜಾಗದಲ್ಲೇ
ಹೊಚ್ಚ ಹೊಸ ರೂಪ ಧರಿಸಿ ಮುಂದೆ ಸಾಗುವುದು
ಬಹುರೂಪಿಣಿ ಈ ಊಸರವಳ್ಳಿ.
ಹೊತ್ತಿಗೆ ತಕ್ಕಂತೆ ಗತ್ತು ಬದಲಿಸಿ
ಮಾತನಾಡುವವರನ್ನ ನೋಡಿ ನಾಚಿದೆ
ತಾನಿಂದು ಊಸರವಳ್ಳಿ,
ತನ್ನ ಮೈ ಬಣ್ಣಗಳಿಗಿಂತ ಹೆಚ್ಚು ವರ್ಣಗಳು
ಈ ಕುಲಗೇಡಿಗಳ ಕಲುಷಿತ ಮನಗಳಲ್ಲಿ
ಮುಸುಕು ಹಾಕಿ ಕುಂತಿವೆಯೆಂದು!
ಪರಿಸರ ಸ್ನೇಹಿ ಈ ವಿವಿಧ ರೂಪಧಾರಿ
ಕ್ರಿಮಿ ಕೀಟಗಳನು ಉಂಡು ಜೀವಿಸುವುದು,
ಘೋರ ಕಟುಕರು ದುರ್ಜನರು
ತನ್ನೆದುರು ಬದುಕುವ ಮನುಜನ
ಭಾವನೆಗಳ ಸಿಹಿಯನು ಉಂಡು
ಕಠೋರ ವಿಷವನು
ಕಾಣಿಕೆಯಾಗಿ ಕೊಟ್ಟು ಹೋಗುವರು!
ಕುಂತ ಜಾಗದಲ್ಲೇ ಕತ್ತು ತಿರುಗಿಸದೆ
ಪರಿಸರ ಪರಿವೇಕ್ಷಣೆ ನಡೆಸುವುದು ಈ ಸರಿಸೃಪ,
ನೆತ್ತಿ ಹೆತ್ತಿ, ನಾಜೂಕು ಮಾತಾಡಿ
ಕಣ್ಣಲ್ಲಿ ಮಣ್ಣೆಸೆದು ಬೆಕ್ಕಿನಂತೆ ಜಾರುವುದು
ನಕಲಿ ನರರ ಕೈಚಳಕದ ಉಜ್ಜುಗದ ತದ್ರೂಪ ಮೂರು ಬಿಟ್ಟ ಅಪರೂಪ ಮಹಾನುಭಾವರ ಕೀರ್ತಿ ಕಾಣಿರಪ್ಪ!